ಛತ್ತೀಸ್ಗಢ : ಇಲ್ಲೊಬ್ಬ ಮಹಿಳೆ ತನ್ನ ಕೋಳಿಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು, ಪಕ್ಕದ ಮನೆಯವರು ಇದನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ತಕ್ಷಣವೇ ಎಫ್ಐಆರ್ ದಾಖಲಿಸಿಕೊಳ್ಳಿ ಎಂದು ಹೇಳಿರುವ ವಿಚಿತ್ರ ಘಟನೆ ಛತ್ತಿಸ್ಗಢದ ಬಿಲಾಸ್ಪುರನಲ್ಲಿ ನಡೆದಿದೆ.
ಬಿಲಾಸ್ಪುರದ ರತನ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿಲ್ದಾಹ ಗ್ರಾಮದ ಜಾನಕಿ ಬಾಯಿ ಎಂಬ ಮಹಿಳೆ ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕುತ್ತಿದ್ದಾರೆ. ಕೋಳಿಗಳು ಅಕ್ಕಪಕ್ಕದ ಮನೆಯ ಅಂಗಳಕ್ಕೆ ಹೋಗುತ್ತವೆ. ನೆರೆ ಮನೆಯ ಮಹಿಳೆಯೊಬ್ಬರು ತನ್ನ ಕೋಳಿಯನ್ನು ಹಿಡಿದು ರೆಕ್ಕೆಯನ್ನು ಕತ್ತರಿಸಿದ್ದಾರೆ. ನಾನು ಜಗಳ ಮಾಡಿ ನನ್ನ ಹುಂಜವನ್ನು ತಂದಿದ್ದೇನೆ ಎಂದು ಮಹಿಳೆ ಗಾಯಗೊಂಡಿರುವ ಹುಂಜವನ್ನು ಪೊಲೀಸರಿಗೆ ತೋರಿಸುತ್ತಾ ದೂರಿದ್ದಾಳೆ. ಅಲ್ಲದೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾಳೆ.
ಮಹಿಳೆ ಆರೋಪವನ್ನು ನಂಬದ ಪೊಲೀಸರು ಸ್ಪಷ್ಟನೆಗಾಗಿ ಮಹಿಳೆಯ ಪತಿಯನ್ನು ಕರೆಸಿದ್ದಾರೆ. ವಿಚಿತ್ರವೆಂದರೆ ಆತ ಕೂಡ ತನ್ನ ಪತ್ನಿಯ ಪರ ಮಾತನಾಡಿ ಪಕ್ಕದ ಮನೆಯವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಕೋಳಿಯನ್ನು ಕೊಲ್ಲಲು ಯತ್ನಿಸಿದ ಆರೋಪ ಹೊತ್ತಿದ್ದ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದಾರೆ. ಆದರೆ ಆ ಮಹಿಳೆ ಕೋಳಿಯನ್ನು ತಾನು ಕೊಲ್ಲಲು ಪ್ರಯತ್ನಿಸಲಿಲ್ಲ, ಸುಳ್ಳು ಆರೋಪ ಎಂದು ವಾದಿಸಿದ್ದಾಳೆ. ನಂತರ ಪೊಲೀಸರು ಇಬ್ಬರನ್ನು ರಾಜಿ ಮಾಡಿ ಠಾಣೆಯಿಂದ ಕಳುಹಿಸಿದ್ದಾರೆ.