ನವದೆಹಲಿ : ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಇಬ್ಬರು ಮಕ್ಕಳ ವಿರುದ್ಧದ 'ಆದಾಯ ಮೀರಿ ಆಸ್ತಿ ಗಳಿಕೆ' ಆರೋಪಕ್ಕೆ ಸಂಬಂಧಿಸಿ ಸಿಬಿಐ ಸಲ್ಲಿಸಿದ್ದ ಪ್ರಾಥಮಿಕ ತನಿಖೆಯ ಸಮಾಪ್ತಿ ವರದಿಯ ಪ್ರತಿಯನ್ನು ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಲಾಯಂ ಸಿಂಗ್, ಅಖಿಲೇಶ್ ಯಾದವ್ ಮತ್ತು ಪ್ರತೀಕ್ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖೆಯನ್ನು ಸಿಬಿಐ 2013ರ ಆಗಸ್ಟ್‌ನಲ್ಲಿಯೇ ಮುಕ್ತಾಯಗೊಳಿಸಿದೆ. ತನಿಖೆಯ ವರದಿಯನ್ನು 2013ರ ಅಕ್ಟೋಬರ್ 8ರಂದು ಕೇಂದ್ರೀಯ ವಿಚಕ್ಷಣಾ ಆಯೋಗಕ್ಕೆ (ಸಿವಿಸಿ) ಸಲ್ಲಿಸಿದೆ. ಇದಾಗಿ 9 ವರ್ಷಗಳ ಬಳಿಕ ಅಂದರೆ, 2019ರಲ್ಲಿ ಸಮಾಪ್ತಿ ವರದಿಗಾಗಿ ಮನವಿ ಮಾಡಲಾಗಿರುವ ಕಾರಣ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು ಹೇಳಿದೆ.
ಸಮಾಪ್ತಿ ವರದಿ ಕುರಿತು 2019ರಲ್ಲೇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದ ಸಿಬಿಐ, ಮುಲಾಯಂ ಸಿಂಗ್ ಮತ್ತು ಅವರ ಇಬ್ಬರು ಮಕ್ಕಳು ಗಂಭೀರ ಅಪರಾಧ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಹಾಗಾಗಿ ಪ್ರಾಥಮಿಕ ತನಿಖೆಯನ್ನು ಎಫ್‌ಐಆರ್ ಆಗಿ ಬದಲಿಸಲಿಲ್ಲ ಮತ್ತು ಈ ಆರೋಪಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗಲಿಲ್ಲ ಎಂದು ಹೇಳಿತ್ತು.