ಕಾಸರಗೋಡು: ಕುಂಠಿತತೆಯಿಂದ ಬೆಳವಣಿಗೆಯತ್ತ ಸಾಗುವ ಗುರಿಯನ್ನು ಸಾಧಿಸಲು ರಾಜ್ಯ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಆರಂಭಿಸುವ “ವಿವಾ ಕೇರಳಂ” ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೊಡಂಬೆಳ್ಳೂರು ಪಂಚಾಯತ್ ನ ಬೆಳ್ಳೂರು ಶಿವ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕೊಡಮ್ ಬೆಳ್ಳೂರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಜಾ ಪಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ರಾಮದಾಸ್ ಎ. ವಿ ಮುಖ್ಯ ಭಾಷಣ ಮಾಡಿದರು.
15-59 ವರ್ಷದೊಳಗಿನ ಎಲ್ಲಾ ಮಹಿಳೆಯರು ರಕ್ತಹೀನತೆ ತಪಾಸಣೆ ಮಾಡಿಸಿಕೊಳ್ಳಬೇಕು, ರಕ್ತಹೀನತೆ ಇರುವವರು ಚಿಕಿತ್ಸೆ ಮೂಲಕ ಪರಿಹರಿಸಿಕೊಳ್ಳಬೇಕು, ರಕ್ತ ಪರೀಕ್ಷೆ, ಚಿಕಿತ್ಸೆ ಮತ್ತು ಜಾಗೃತಿಯಿಂದ ಮಾತ್ರ ರಕ್ತಹೀನತೆ ನಿರ್ಮೂಲನೆ ಮಾಡಲು ಸಾಧ್ಯ ಆದ್ದರಿಂದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಹೇಳಿದರು.
ರಕ್ತಹೀನತೆ ಪತ್ತೆ ಹಚ್ಚಲು ಜಾಗೃತಿ ತರಗತಿ ಹಾಗೂ ಮೆಗಾ ರಕ್ತ ಪರೀಕ್ಷೆ ಶಿಬಿರ ಆಯೋಜಿಸಿದೆ. ಶಿಬಿರದಲ್ಲಿ 15 ರಿಂದ 59 ವರ್ಷದೊಳಗಿನ 316 ಜನರ ರಕ್ತ ಪರೀಕ್ಷೆ ನಡೆಸಲಾಯಿತು. ಕಾರ್ಯಕ್ರಮದ ನಿಮಿತ್ತ ಬುಡಕಟ್ಟು ಜನಾಂಗದವರ ಕಲಾ ಪ್ರಕಾರಗಳಾದ ಮಂಗಳಂ ಕಳಿ, ಜಾನಪದ ಗೀತೆ, ಕಬ್ಬಿಣದ ಸಾರವಿರುವ ಆಹಾರ ವಸ್ತುಗಳ ಪ್ರದರ್ಶನ, ಜಾಗೃತಿ ಜಾಥಾ ಎಂಬಿವುಗಳನ್ನು ಏರ್ಪಡಿಸಲಾಗಿತ್ತು.
ಪರಿಶಿಷ್ಟ ಪಂಗಡದವರು ವಾಸಿಸುವ ಪ್ರದೇಶಗಳು, ಕರಾವಳಿ ಪ್ರದೇಶಗಳಲ್ಲಿ, ಆಸ್ಪತ್ರೆ, ಕುಟುಂಬ ಕಲ್ಯಾಣ ಉಪಕೇಂದ್ರಗಳು ಹಾಗೂ ಅಂಗನವಾಡಿಗಳಲ್ಲಿ ಮುಂದಿನ ದಿನಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಮಾಹಿತಿ ನೀಡಿದ್ದಾರೆ.