ಬೀಜಿಂಗ್: ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಕ್ಟೋಬರ್‌ನಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿ ಕ್ಸಿ ಇನ್ನೂ ಐದು ವರ್ಷಗಳ ಅಧಿಕಾರ ಪಡೆದ ನಂತರ ಚೀನಾದ ರಬ್ಬರ್-ಸ್ಟ್ಯಾಂಪ್ ಸಂಸತ್ತು ಇದೀಗ ಅವರನ್ನು ಮೂರನೇ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಶೂನ್ಯ ಕೋವಿಡ್ ನೀತಿ ಮತ್ತು ಅಪಾರ ಸಂಖ್ಯೆಯ ಜನರ ಸಾವಿನಿಂದಾಗಿ 69 ವರ್ಷದ ಕ್ಸಿ- ಜಿನ್ ಪಿಂಗ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತು. ಆದಾಗ್ಯೂ, ಈ ಎಲ್ಲಾ ಸಮಸ್ಯೆಗಳನ್ನು ತಡೆದಿರುವ ಚೀನಾದ ಶಾಸಕಾಂಗ ನ್ಯಾಷನಲ್ ಫೀಪಲ್ಸ್ ಕಾಂಗ್ರೆಸ್, ಕ್ಸಿ- ಜಿನ್ ಪಿಂಗ್ ಅವರನ್ನು ಮುಂದಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಅನುಮೋದಿಸಿದೆ.
ಶುಕ್ರವಾರ ಎನ್ ಪಿಸಿ ಪ್ರತಿನಿಧಿಗಳು ಕ್ಸಿ ಅವರನ್ನು ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಮತ್ತು ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರನ್ನಾಗಿ ಸರ್ವಾನುಮತದಿಂದ ಪುನರ್ ಆಯ್ಕೆ ಮಾಡಿತು. ಕ್ಸಿ- ಪರವಾಗಿ ಒಟ್ಟಾರೇ 2, 952 ಮತಗಳು ಬಂದವು.
ನಂತರ ಅವರು ಪ್ರಮಾಣ ವಚನ ಸ್ವೀಕರಿಸಿದರು."ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂವಿಧಾನಕ್ಕೆ ನಿಷ್ಠನಾಗಿ, ಅಧಿಕಾರವನ್ನು ಎತ್ತಿಹಿಡಿಯಲು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಕರ್ತವ್ಯ ನಿರ್ವಹಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು.