ನವದೆಹಲಿ: ಹಿಂದುಳಿದ ವರ್ಗದವರ ಬಗ್ಗೆ ನೀಡಿದ್ದ ಅಸಭ್ಯ ಹೇಳಿಕೆ ಕುರಿತು ರಾಹುಲ್ ಗಾಂಧಿಯವರು ಕ್ಷಮೆ ಕೋರಲು ನಿರಾಕರಿಸಿರುವುದು, ಗಾಂಧಿ ಕುಟುಂಬದ ರಾಜಕೀಯ ದುರಹಂಕಾರದ ಮತ್ತೊಂದು ಮುಖ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಗಳವಾರ ಟೀಕಿಸಿದ್ದಾರೆ.
ನಗರದಲ್ಲಿ ನಡೆದ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಸ್ಮೃತಿ, ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವುದರಿಂದ ರಾಹುಲ್ ಪ್ರಯತ್ನ ಯಶಸ್ವಿಯಾಗದು ಎಂದಿದ್ದಾರೆ.
'ರಾಹುಲ್ ಅವರು 2019ರಲ್ಲಿ ನಿಯತಕಾಲಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮೋದಿಯವರ ಅತಿದೊಡ್ಡ ಶಕ್ತಿ ಅವರ ವ್ಯಕ್ತಿತ್ವವೇ ಆಗಿದೆ. ಅದನ್ನು ಛಿದ್ರ ಮಾಡುತ್ತೇನೆ ಎಂದು ಹೇಳಿದ್ದರು' ಎಂದು ನೆನಪಿಸಿಕೊಂಡಿದ್ದಾರೆ.
'ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ, ನಿಂದನೆ ಮಾಡಿದ್ದರು. ಆದರೆ, ತಮ್ಮದೇ ಹೇಳಿಕೆಗಳನ್ನು ಸಹಿ ಮಾಡುವ ಮೂಲಕ ದೃಢಪಡಿಸಲಿಲ್ಲ. ಇದರೊಂದಿಗೆ ಅವರ ಮನೋವಿಕಾರವು ಬಹಿರಂಗವಾಗಿದೆ' ಎಂದು ಕುಟುಕಿದ್ದಾರೆ.
ರಾಹುಲ್ ಗಾಂಧಿಯವರು ರಾಜಕೀಯ ಹತಾಶೆಯಿಂದ ಮೋದಿ ವಿರುದ್ಧದ ಮಾತುಗಳನ್ನು ಮುಂದುವರಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.
'ಭಾರತದ ಜನರು ಮೋದಿಯವರ ಅತಿದೊಡ್ಡ ಶಕ್ತಿಯಾಗಿದ್ದಾರೆ. ಹಾಗಾಗಿ, ರಾಹುಲ್ ಗಾಂಧಿಯವರೇ, ಮೋದಿ ಅವರ ವ್ಯಕ್ತಿತ್ವವನ್ನು ಛಿದ್ರಗೊಳಿಸುವುದಾಗಿ ನೀವು ನಿಯತಕಾಲಿಕೆಯ ಸಂಪಾದಕರಿಗೆ ನೀಡಿದ್ದ ಮಾತು, ಎಂದಿಗೂ ಈಡೇರುವುದಿಲ್ಲ' ಎಂದು ತಿರುಗೇಟು ನೀಡಿದ್ದಾರೆ.
'ಮೋದಿ' ಉಪನಾಮದ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ, ಲೋಕಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ರಾಹುಲ್ ಅವರು ತಮ್ಮ ಹೇಳಿಕೆ ಮೂಲಕ ಹಿಂದುಳಿದ ಸಮುದಾಯದವನ್ನು ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.