ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ಸ್ಟ್ ಆಧರಿತ ಕಂಟೆಂಟ್ ಪೋಸ್ಟ್ ಮಾಡುವವರಿಗಾಗಿ ಟ್ವಿಟರ್ ಮಾದರಿಯ ಮೊಬೈಲ್ ಆಯಪ್ ರಚಿಸಲು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಮುಂದಾಗಿದೆ ಎಂದು ವರದಿಯಾಗಿದೆ.
ಈ ಯೋಜನೆಗೆ 'P92' ಎಂದು ಕೋಡ್ ನೇಮ್ ಇಡಲಾಗಿದೆ.
ತಮ್ಮ ಇನ್‌ಸ್ಟಾಗ್ರಾಂ ಲಾಗಿನ್ ಮಾಹಿತಿಯನ್ನೇ ಬಳಸಿಕೊಂಡು ಬಳಕೆದಾರರು ಇದಕ್ಕೆ ಲಾಗಿನ್ ಆಗಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತಂತೆ ಮನಿ ಕಂಟ್ರೋಲ್ ವರದಿ ಮಾಡಿದೆ.
'ಟೆಕ್ಸ್ಟ್ ಅಪ್ಡೇಟ್‌ಗಳನ್ನು ಹಾಕುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗಾಗಿ ಸ್ವತಂತ್ರ ವಿಕೇಂದ್ರೀಕೃತ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸುತ್ತಿದ್ದೇವೆ. ಸಮಾಜದ ಜನಪ್ರಿಯ ವ್ಯಕ್ತಿಗಳು ಮತ್ತು ಕಂಟೆಂಟ್ ಸೃಷ್ಟಿಕರ್ತರು ತಮ್ಮ ಆಸಕ್ತಿಗೆ ತಕ್ಕಂತೆ ಅಪ್ಡೇಟ್‌ಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯ ಅಗತ್ಯವಿದೆ ಎಂದು ನಾವು ನಂಬಿದ್ದೇವೆ' ಎಂದು ಕಂಪನಿ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಂ ಮೊಸ್ಸೊರಿ ಅವರು, ಈ ಯೋಜನೆಯ ನೇತೃತ್ವ ವಹಿಸಿದ್ದಾರೆ.
ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೆ, ಕಾನೂನು ಮತ್ತು ನಿಯಂತ್ರಣ ತಂಡಗಳು ಆಯಪ್‌ಗೆ ಸಂಬಂಧಿಸಿದ ಪ್ರೈವೆಸಿ ವಿಷಯಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ 'ನೋಟ್ಸ್' ಎಂಬ ಹೊಸ ಫೀಚರ್ ಅನ್ನು ಇನ್‌ಸ್ಟಾಗ್ರಾಂ ಪರಿಚಯಿಸಿತ್ತು. ಇದರಲ್ಲಿ ಕೇವಲ 60 ಅಕ್ಷರಗಳ ಟೆಕ್ಸ್ಟ್ ಮತ್ತು ಎಮೊಜಿ ಬಳಸಿಕೊಂಡು ಪೋಸ್ಟ್ ಮಾಡಬಹುದಾಗಿದೆ.