ತಿರುವನಂತಪುರಂ(PTI): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಮೇಲಿನ ಹಿಂಸಾತ್ಮಕ ದಾಳಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ.
'ಮೋದಿ ಉಪನಾಮ' ಕುರಿತಂತೆ 2019ರಲ್ಲಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಾಹುಲ್ ಗಾಂಧಿ ತಪ್ಪಿತಸ್ಥರು ಎಂದು ಸೂರತ್ ನ್ಯಾಯಾಲಯ ಗುರುವಾರವಷ್ಟೇ ತೀರ್ಪು ನೀಡಿತ್ತು.
ಇದರ ಬೆನ್ನಲ್ಲೇ ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಅವರ ಅನರ್ಹತೆಯು ಮಾರ್ಚ್ 23 ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಪಿಣರಾಯಿ ವಿಜಯನ್, ರಾಹುಲ್ ಗಾಂಧಿಯವರ 'ತುರ್ತ' ಅನರ್ಹತೆಯು ಪ್ರಜಾಪ್ರಭುತ್ವದ ಮೇಲಿನ ಹಿಂಸಾತ್ಮಕ ದಾಳಿಯು ಹೊಸ ಅಧ್ಯಾಯದಂತೆ ಕಂಡು ಬಂದಿದೆ ಎಂದಿದ್ದಾರೆ.
ಪ್ರಾಬಲ್ಯದಿಂದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಫ್ಯಾಸಿಸ್ಟ್ ವಿಧಾನವಾಗಿದೆ ಎಂದು ವಿಜಯನ್ ಕಿಡಿಕಾರಿದ್ದಾರೆ.