ಪಾಟ್ನಾ: ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಟಿವಿ ಪರದೆಗಳಲ್ಲಿ ಜಾಹೀರಾತಿನ ವಿರಾಮದ ನಂತರ ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರಸಾರಗೊಂಡು, ನಿಲ್ದಾಣದಲ್ಲಿನ ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿರುವ ಘಟನೆ ರವಿವಾರ ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಇದರಿಂದ ಗೊಂದಲಕ್ಕೊಳಗಾದ ಪ್ರಯಾಣಿಕರು ಸಮಯ ವ್ಯರ್ಥ ಮಾಡದೆ ಕೂಡಲೇ ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಭದ್ರತಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಕುರಿತು ಕ್ರಮ ಕೈಗೊಳ್ಳಲು ಸರ್ಕಾರಿ ರೈಲ್ವೆ ಪೊಲೀಸರು ವಿಳಂಬ ಮಾಡಿದಾಗ, ಮಧ್ಯಪ್ರವೇಶಿಸಿದ ರೈಲ್ವೆ ಭದ್ರತಾ ಪೊಲೀಸರು, ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪ್ರಸಾರ ಮಾಡುವ ಜವಾಬ್ದಾರಿ ಹೊತ್ತಿರುವ ದತ್ತಾ ಕಮ್ಯುನಿಕೇಶನ್ಸ್ ಅನ್ನು ಸಂಪರ್ಕಿಸಿ, ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ ಜನರ ಎದುರು ಅಶ್ಲೀಲ ಚಿತ್ರ ಪ್ರಸಾರ ಮಾಡುವುದನ್ನು ತಡೆ ಹಿಡಿಯಬೇಕು ಎಂದು ಸಂಸ್ಥೆಯ ನಿರ್ವಾಹಕರಿಗೆ ಸೂಚಿಸಿದ್ದಾರೆ.
ಇದಾದ ನಂತರ ರೈಲ್ವೆ ಅಧಿಕಾರಿಗಳೂ ಕ್ರಮಕ್ಕೆ ಮುಂದಾಗಿ, ದತ್ತಾ ಕಮ್ಯುನಿಕೇಶನ್ಸ್ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿದ್ದಾರೆ. ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿರುವ ರೈಲ್ವೆ ಇಲಾಖೆಯು, ಅದರ ಮೇಲೆ ದಂಡವನ್ನೂ ವಿಧಿಸಿದೆ.
ರೈಲ್ವೆ ನಿಲ್ದಾಣದಲ್ಲಿನ ಟಿವಿ ಪರದೆಗಳ ಮೇಲೆ ಜಾಹೀರಾತು ಪ್ರಸಾರ ಮಾಡಲು ದತ್ತಾ ಕಮ್ಯುನಿಕೇಶನ್ಸ್‌ಗೆ ನೀಡಿದ್ದ ಗುತ್ತಿಗೆಯನ್ನು ರೈಲ್ವೆ ಇಲಾಖೆಯು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ರೈಲ್ವೆ ಇಲಾಖೆಯು ಪ್ರತ್ಯೇಕ ತನಿಖೆ ಕೈಗೊಂಡಿದೆ.
ಈ ನಡುವೆ, ನಿರ್ದಿಷ್ಟವಾಗಿ ಪ್ಲಾಟ್‌ಫಾರ್ಮ್ 10ರಲ್ಲೇ ಆ ಅಶ್ಲೀಲ ವಿಡಿಯೊ ಪ್ರಸಾರವಾಗಿರುವುದರ ಕುರಿತು ಕೆಲವು ಅಧಿಕಾರಿಗಳು ಪ್ರಶ್ನೆ ಎತ್ತಿದ್ದಾರೆ.