ಪ್ರತಿನಿತ್ಯ ಮುಖ ತೊಳೆಯುವ ಅಭ್ಯಾಸ ಒಳ್ಳೆಯದು. ಇದರಿಂದ ಮುಖದಲ್ಲಿರೋ ಧೂಳು, ಬ್ಯಾಕ್ಟೀರಿಯಾದಂತಹ ಅವಶೇಷಗಳು ತೊಲಗುತ್ತದೆ. ಆದರೆ ಅನೇಕರಿಗೆ ಮುಖ ತೊಳೆಯುವ ಬಗ್ಗೆ ಕೆಲವೊಂದು ಗೊಂದಲಗಳಿದೆ.
ಮುಖ್ಯವಾಗಿ ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು? ಯಾವ ಪ್ರಾಡಕ್ಟ್‌ಗಳನ್ನು ಬಳಕೆ ಮಾಡಿದರೆ ಉತ್ತಮ? ಮುಖಕ್ಕೆ ಬಿಸಿ ನೀರು ಅಥವಾ ತಣ್ಣೀರು ಬಳಸಬೇಕಾ? ಹೀಗೆಲ್ಲಾ ಅನೇಕ ಗೊಂದಲಗಳಿದೆ. ನಿಮ್ಮೆಲ್ಲಾ ಗೊಂದಲಗಳಿಗೆ ಇವತ್ತು ನಾವು ಉತ್ತರ ಕೊಡ್ತೀವಿ.
ಮುಖಕ್ಕೆ ತಣ್ಣೀರು ಬಳಸುವುದರಿಂದ ಆಗುವ ಲಾಭಗಳೇನು?
ಪ್ರತಿನಿತ್ಯ ತಣ್ಣೀರಿನಿಂದ ಮುಖತೊಳೆಯುವ ಅಭ್ಯಾಸ ಒಳ್ಳೆಯದು. ಇದು ಚರ್ಮದ ಮೇಲೆ ಅನೇಕ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮೊಡವೆ ತಡೆಗಟ್ಟುವಿಕೆ ಹೀಗೆ ಅನೇಕ ಸಂಭಾವ್ಯ ಪ್ರಯೋಜನಗಳಿದೆ. ಹಾಗೂ ಮುಖದ ಕಾಂತಿ ಹೆಚ್ಚಾಗುತ್ತದೆ.
ಬಿಸಿನೀರಿನಿಂದ ಮುಖ ತೊಳೆದರೆ ಮುಖ ಒಡೆಯುತ್ತದೆ ಹಾಗೂ ಚರ್ಮದ ಮೇಲಿನ ಎಣ್ಣೆಯ ಅಂಶವನ್ನು ಸಂಪೂರ್ಣವಾಗಿ ತೊಡೆದು ಹಾಕಿ ಚರ್ಮ ಒಣಗಿದಂತಾಗುತ್ತದೆ. ತಣ್ಣೀರನ್ನು ಬಳಸುವುದರಿಂದ ಇದು ತೈಲ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ ಬಿಸಿನೀರು ರಕ್ತನಾಳಗಳು ಹೆಚ್ಚು ಹಿಗ್ಗುವಂತೆ ಮಾಡುತ್ತದೆ. ಮತ್ತು ನಿಮ್ಮ ಚರ್ಮವು ಕೆಂಪಾಗುವಂತೆ ಮಾಡುತ್ತದೆ.
ಮುಖಕ್ಕೆ ತಣ್ಣೀರು ಬಳಸುವುದರಿಂದ ಆಗುವ ಅನಾನುಕೂಲಗಳೇನು?
ತಣ್ಣನೆಯ ನೀರು ನಿಮ್ಮ ಮುಖದ ರಂಧ್ರಗಳನ್ನು ಬಿಗಿಗೊಳಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ಇತರ ಕ್ರಿಮಿಗಳು ಅದರೊಳಗಡೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮೇಕಾಪ್ ತೆಗೆಯುವಾಗ ಮೊದಲು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಆನಂತರ ತಣ್ಣೀರು ಬಳಸಿದರೆ ಉತ್ತಮ.
ನಿತ್ಯ ಎಷ್ಟು ಬಾರಿ ಮುಖ ತೊಳೆದರೆ ಉತ್ತಮ
ಸಾಮಾನ್ಯವಾಗಿ, ನೀವು ದಿನಕ್ಕೆ ಎರಡು ಬಾರಿ ನಿಮ್ಮ ಮುಖವನ್ನು ತೊಳೆಯಬೇಕು. ಅದು ಕೂಡ ಬೆಳಿಗ್ಗೆ ಮತ್ತು ರಾತ್ರಿ. ಕೆಲವರು ಗಂಟೆಗೊಂದು ಸಲ ಮುಖ ತೊಳೆಯುತ್ತಲೇ ಇರುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಇದು ನಿಮ್ಮ ಚರ್ಮವನ್ನು ಒಣಗಿದಂತೆ ಮಾಡುತ್ತದೆ ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಬೆಳಗ್ಗೆ ಎಂದ ತಕ್ಷಣ ಮುಖ ತೊಳೆಯಬೇಕು ಯಾಕೆಂದರೆ ತಲೆದಿಂಬುವಿನಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತದೆ ಅದು ನಿಮ್ಮ ಮುಖಕ್ಕೆ ತಗುಲಿರುತ್ತದೆ ಮುಖ ತೊಳೆಯುವುದರಿಂದ ಆ ಅನುಪಯುಕ್ತ ಬ್ಯಾಕ್ಟೀರಿಯಾಗಳನ್ನು ತೊಲಗಿಸಬಹುದು.
ಇನ್ನೂ ರಾತ್ರಿ ಒಂದು ಬಾರಿ ಮುಖ ತೊಳೆಯುವ ಅಭ್ಯಾಸ ಒಳ್ಳೆಯದು. ಕೆಲಸಕ್ಕೆ ಹೋಗುವವರಾದರೆ ಮುಖದ ತುಂಬಾ ಮೇಕಪ್ ಇರುತ್ತದೆ ಹಾಗೂ ರಾತ್ರಿ ಹೊರಗಡೆ ಹೋಗಿ ಬಂದ ತಕ್ಷಣ ಮುಖತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಮೊದಲು ಮುಖ ಫ್ರೆಶ್ ಆಗಿದ್ದರೆ ಒಳ್ಳೆಯದು.
ಮುಖದ ಆರೋಗ್ಯ ಕಾಪಾಡಲು ಸಿಂಪಲ್ ಟಿಪ್ಸ್
* ಮುಖದ ಚರ್ಮ ತುಂಬಾನೇ ಸೂಕ್ಷ್ಮವಾಗಿರುವುದರಿಂದ ಆದಷ್ಟು ಮೃದುವಾದ ಟವಲ್‌ನಿಂದ ಮುಖವನ್ನು ಒರೆಸಿಕೊಳ್ಳಿ
* ವ್ಯಾಯಾಮ ನಂತರ ಮುಖದ ಮೇಲಿನ ಬೆವರನ್ನು ಒರೆಸದೇ ಹಾಗೆಯೇ ಬಿಡಬೇಡಿ.
* ಪ್ರತಿನಿತ್ಯ ಕನಿಷ್ಠ ಎಂಟು ಗ್ಲಾಸ್‌ಗಳಷ್ಟು ನೀರನ್ನು ಕುಡಿಯಲು ಮರೆಯದಿರಿ. ಇದು ನಿಮ್ಮ ಮುಖವನ್ನು ಹೈಡ್ರೇಟ್ ಆಗಿರಲು ಸಹಕರಿಸುತ್ತದೆ.
* ಮೇಕಪ್ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಡಿ. ಒಂದು ವೇಳೆ ಬಳಕೆ ಮಾಡುತ್ತೀರಿ ಎಂದಾದರೆ ಉತ್ತಮ ಗುಣಮಟ್ಟದ ಪ್ರಾಡಕ್ಟ್‌ಗಳನ್ನೇ ಬಳಸಿ. ಹಾಗೂ ಮೇಕಪ್ ತೆಗೆಯುವಾಗ ಮುಖದಿಂದ ಸಂಪೂರ್ಣವಾಗಿ ಮೇಕಪ್ ಹೋಗುವಂತೆ ನೋಡಿಕೊಳ್ಳಿ. ಆದಷ್ಟು ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಹೋಮ್ ರೆಮಿಡಿಗಳ ಮೊರೆ ಹೋಗಿ. ಕೆಮಿಕಲ್ ಬಳಸಬೇಡಿ. ವಿಟಮಿನ್ ಸಿ, ಸಿರಮ್ ಹಾಗೂ ಲೋಷನ್‌ಗಳು ನಿಮ್ಮ ಮುಖವನ್ನು ಕಾಂತಿಯುತವಾಗಲು ಸಹಕರಿಸುತ್ತದೆ.
ಮುಖದ ಕಾಂತಿಗೆ ತಣ್ಣೀರು ಉತ್ತಮ. ಆದರೆ ಕೆಲವೊಂದು ಬಾರಿ ಇದು ನಿಮ್ಮ ಚರ್ಮದ ಮೇಲೂ ಅವಲಂಭಿತವಾಗಿರುತ್ತದೆ. ನೀವು ಯಾವ ರೀತಿಯ ಚರ್ಮ ಹೊಂದಿದ್ದೀರಿ ಅದರ ಅನುಗುಣದ ಮೇಲೆ ಚರ್ಮ ರೋಗ ತಜ್ಞರು ನಿಮಗೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಆದ್ದರಿಂದ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.