ನವದೆಹಲಿ: ಕ್ರಿಪ್ಟೋ ಕರೆನ್ಸಿ ಅಥವ ವರ್ಚ್ಯುಯಲ್ ಆಸ್ತಿಗಳ ಮೇಲೆ ಭಾರತ ಸರ್ಕಾರ ಅಕ್ರಮ ಹಣವರ್ಗಾವಣೆಗಳ ನಿಬಂಧನೆಗಳನ್ನು ವಿಧಿಸಿದೆ.
ವಿದೇಶಗಳಲ್ಲಿನ ಡಿಜಿಟಲ್ ಆಸ್ತಿಗಳನ್ನು ಬಿಗಿಗೊಳಿಸುವುದಕ್ಕಾಗಿ ಭಾರತ ಸರ್ಕಾರ ಈ
ಕ್ರಮಕ್ಕೆ ಮುಂದಾಗಿದೆ. ಕ್ರಿಪ್ಟೋ ಟ್ರೇಡಿಂಗ್, ಸೇಫ್ ಕೀಪಿಂಗ್ ಹಾಗೂ ಸಂಬಂಧಿತ
ಆರ್ಥಿಕ ಸೇವೆಗಳಿಗೆ ಅಕ್ರಮ ಹಣ ವರ್ಗಾವಣೆ ಕಾನೂನನ್ನು ಅನ್ವಯಿಸಲಾಗಿದೆ ಎಂದು ಈ ಬಗ್ಗೆ
ಪ್ರಕಟಿಸಿರುವ ಗೆಜೆಟ್ ನಲ್ಲಿ ಹಣಕಾಸು ಸಚಿವಾಲಯ ಹೇಳಿದೆ.
ಭಾರತೀಯ ಕ್ರಿಪ್ಟೋ ವಿನಿಮಯಗಳು ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್ ಇಂಡಿಯಾ (FIU-IND) ಗೆ ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಬೇಕಾಗುತ್ತವೆ.
ಬ್ಯಾಂಕ್ ಹಾಗೂ ಷೇರು ದಲ್ಲಾಳಿಗಳು ಸೇರಿದಂತೆ ನಿಯಂತ್ರಣಕ್ಕೊಳಪಟ್ಟ ಸಂಸ್ಥೆಗಳು ಪಾಲಿಸುವ, ಅಕ್ರಮ ಹಣ ವರ್ಗಾವಣೆ ವಿರೋಧಿ ಮಾನದಂಡಗಳನ್ನು ಡಿಜಿಟಲ್ ಆಸ್ತಿ ವೇದಿಕೆಗಳೂ ಪಾಲನೆ ಮಾಡುವ ಜಾಗತಿಕ ಟ್ರೆಂಡ್ ಜೊತೆಗೆ ಹೆಜ್ಜೆ ಹಾಕುವ ಕ್ರಮ ಇದಾಗಿದೆ.
ಕಳೆದ ಕೆಲವು ವರ್ಷಗಳಿಂದ ಜಾಗತಿಕಮಟ್ಟದಲ್ಲಿ ನಾನ್ ಫಂಗಬಲ್ ಟೋಕನ್ (ಎನ್‌ಎಫ್‌ಟಿ) ಮಾದರಿಯ ಡಿಜಿಟಲ್ ಕರೆನ್ಸಿ ಹಾಗೂ ಆಸ್ತಿಗಳು ಆಕರ್ಷಣೆ ಗಳಿಸಿವೆ.
ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳನ್ನು ಪ್ರಾರಂಭಿಸುವುದರೊಂದಿಗೆ ಈ ಸ್ವತ್ತುಗಳಲ್ಲಿನ ವಹಿವಾಟು ಬಹುಪಟ್ಟು ಹೆಚ್ಚಾಗಿದೆ. ಆದರೆ ಕಳೆದ ವರ್ಷದವರೆಗೂ ಭಾರತ ಇಂತಹ ವಹಿವಾಟು ಅಥವಾ ಆಸ್ತಿ ವರ್ಗಗಳನ್ನು ನಿಯಂತ್ರಿಸುವುದು ಅಥವಾ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಯನ್ನು ಹೊಂದಿರಲಿಲ್ಲ.
ವರ್ಚುವಲ್ ಡಿಜಿಟಲ್ ಸ್ವತ್ತುಗಳು ಮತ್ತು ಫಿಯೆಟ್ ಕರೆನ್ಸಿಗಳ ನಡುವಿನ ವಿನಿಮಯ, ಒಂದು ಅಥವಾ ಹೆಚ್ಚಿನ ವರ್ಚುವಲ್ ಡಿಜಿಟಲ್ ಸ್ವತ್ತುಗಳ ನಡುವೆ ವಿನಿಮಯ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ಸುರಕ್ಷತೆ ಅಥವಾ ನಿರ್ವಹಣೆ ಅಥವಾ ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ ನಿಯಂತ್ರಣವನ್ನು ಸಕ್ರಿಯಗೊಳಿಸುವ ಸಾಧನಗಳು ಮತ್ತು ಹಣಕಾಸು ಸೇವೆಗಳಲ್ಲಿ ಭಾಗವಹಿಸುವಿಕೆ ಮತ್ತು ಸೇವೆಗಳ ಒದಗಿಸುವಿಕೆ, ವಿತರಕರ ಕೊಡುಗೆ ಮತ್ತು ವರ್ಚುವಲ್ ಡಿಜಿಟಲ್ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದೆ" ಈಗ ಹಣ-ಲಾಂಡರಿಂಗ್ ತಡೆ ಕಾಯಿದೆ, 2002 ರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಗೆಜೆಟ್ ಅಧಿಸೂಚನೆ ತಿಳಿಸಿದೆ.
ಕ್ರಿಪ್ಟೋ ಸ್ವತ್ತುಗಳನ್ನು ನಿಯಂತ್ರಿಸುವುದಕ್ಕೆ ಸ್ಟ್ಯಾಂಡರ್ಡ್ ಆಪರೇಟಿಂಗ್
ಪ್ರೋಟೋಕಾಲ್ (ಎಸ್ಒಪಿ) ನ್ನು ಅಭಿವೃದ್ಧಿಪಡಿಸುವುದಕ್ಕೆ ಭಾರತ ಜಿ-20 ಸದಸ್ಯ
ರಾಷ್ಟ್ರಗಳೊಂದಿಗೆ ಭಾರತ ಚರ್ಚೆ ನಡೆಸುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್
ಸಂಸತ್ ಗೆ ಕಳೆದ ತಿಂಗಳು ತಿಳಿಸಿದ್ದರು.
2022-23 ರ ಬಜೆಟ್ ನಲ್ಲಿ ಕ್ರಿಪ್ಟೋ ಅಸೆಟ್ ಗಳಿಗೆ ಸಂಬಂಧಿಸಿದ ವಹಿವಾಟುಗಳಿಂದ ಬರುವ
ಆದಾಯಕ್ಕೆ ಬಜೆಟ್ ನಲ್ಲಿ ಶೇ.30 ರಷ್ಟು ತೆರಿಗೆಯನ್ನು ಘೋಷಿಸಲಾಗಿತ್ತು.