ನವದೆಹಲಿ: ಹೋಟೆಲ್, ರೆಸ್ಟೋರೆಂಟ್, ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ಮಾಡುವ ಸಲುವಾಗಿ ಗೊತ್ತುಪಡಿಸಿರುವ 'ಧೂಮಪಾನ ವಲಯ'ಗಳನ್ನು ರದ್ದುಪಡಿಸಬೇಕು ಎಂದು ವೈದ್ಯರು, ಕ್ಯಾನ್ಸರ್ ರೋಗಿಗಳು ಮತ್ತು ಹೋಟೆಲ್ ಸಹಯೋಗಗಳು ಸರ್ಕಾರವನ್ನು ಒತ್ತಾಯಿಸಿವೆ.
ಧೂಮಪಾನಿಗಳಲ್ಲದ ಇತರರನ್ನು ಧೂಮಪಾನದ ದುಷ್ಪರಿಣಾಮದಿಂದ ರಕ್ಷಿಸಲು ಈ ಕ್ರಮ ಕೈಗೊಳ್ಳಬೇಕು ಎಂದು 'ಧೂಮಪಾನ ವಿರೋಧಿ ದಿನ'ದ ಅಂಗವಾಗಿ ಇವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿಗರೆಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಸಿಒಟಿಪಿಎ)- 2003ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಶ್ಲಾಘಿಸಿರುವ ಅವರು, ದೇಶವನ್ನು ಶೇ 100ರಷ್ಟು ಧೂಮಪಾನ ಮುಕ್ತಗೊಳಿಸುವ ನಿಟ್ಟಿನಲ್ಲಿ ಧೂಮಪಾನಕ್ಕಾಗಿ ಸ್ಥಳ ಮೀಸಲಿರಿಸುವ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
'ಧೂಮಪಾನವು ಶ್ವಾಸಕೋಶ ಸೋಂಕನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ ಮತ್ತು ದೇಹದ ಪ್ರತಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಹೀಗಾಗಿ 'ಧೂಮಪಾನ ವಲಯ' ಎಂಬ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ಈ ವಲಯಗಳನ್ನು ಸಿಒಟಿಪಿಎಯ ಸೂಚನೆ ಪ್ರಕಾರ ಸಜ್ಜುಗೊಳಿಸಲಾಗಿರುವುದಿಲ್ಲ. ಇದರಿಂದಾಗಿ ಧೂಮಪಾನಿಗಳಲ್ಲದ ಇತರರೂ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಮ್ಯಾಕ್ಸ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇರ್‌ನ ಮುಖ್ಯಸ್ಥ ಡಾ. ಹರಿತ್ ಚತುರ್ವೇದಿ ತಿಳಿಸಿದ್ದಾರೆ.
ಸರ್ಕಾರವು ಸಿಒಟಿಪಿಎಗೆ ತಿದ್ದುಪಡಿ ತರುವ ಪ್ರಕ್ರಿಯೆ ಆರಂಭಿಸಿದೆ ಮತ್ತು ಸಿಗರೆಟ್ ಮತ್ತು ಇತರ ತಂಬಾಕು ಉತ್ಪನ್ನ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ತಯಾರಿಕೆ, ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಕಾಯ್ದೆ- 2020ಯನ್ನು ಪರಿಚಯಿಸಿದೆ.
ಧೂಮಪಾನಿಗಳು ಬಿಡುವ ಹೊಗೆ ಸೇವಿಸುವುದು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ದೇಶದ ಶೇ 72ರಷ್ಟು ಜನರು ಬಲವಾಗಿ ನಂಬಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿತ್ತು.