ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲಂಡನ್ ನಲ್ಲಿ ನೀಡಿರುವ ಹೇಳಿಕೆಗಾಗಿ ಕ್ಷಮೆಯಾಚಿಸುವಂತೆ ಬಿಜೆಪಿ ಸಂಸದರು ಪಟ್ಟು ಹಿಡಿದ ಕಾರಣ ಬಜೆಟ್ ಅಧಿವೇಶನದ ಎರಡನೇ ಹಂತವು ಸೋಮವಾರ ಗದ್ದಲದೊಂದಿಗೆ ಪ್ರಾರಂಭವಾಯಿತು.
ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ನೀಡಿದ ಹೇಳಿಕೆಯಿಂದ ಗದ್ದಲದ ದೃಶ್ಯಗಳು ಕಂಡು ಬಂದ ಕಾರಣ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪಿಯೂಷ್ ಗೋಯಲ್ ಹಾಗೂ ಪ್ರಲ್ಹಾದ್ ಜೋಶಿ ಅವರು ಲಂಡನ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ "ಭಾರತ ವಿರೋಧಿ" ಹೇಳಿಕೆಗಳನ್ನು ತರಾಟೆಗೆ ತೆಗೆದುಕೊಳ್ಳುವುದರೊಂದಿಗೆ ಅಧಿವೇಶನ ಆರಂಭವಾಯಿತು
ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ ಭಾಷಣದ ಕುರಿತು ಬಿಜೆಪಿ ನಾಯಕರು ಮಾತನಾಡುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಸದನದ ಬಾವಿಗೆ ನುಗ್ಗಿದರು.
ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಪ್ರತಿಪಕ್ಷಗಳ ನಾಯಕರು ಸಂಸತ್ತಿನ ಮಹಾತ್ಮಗಾಂಧಿ ಪ್ರತಿಮೆಯ ಮುಂದೆ ಕೇಂದ್ರದ ಸಂಸ್ಥೆಗಳ ದುರ್ಬಳಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ರಾಹುಲ್ ಗಾಂಧಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಗಿರಿರಾಜ್ ಸಿಂಗ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಲಂಡನ್ ಭಾಷಣದ ಬಗ್ಗೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಒತ್ತಾಯಿಸಿದ್ದಾರೆ.