ನವದೆಹಲಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಹಿಳೆಯರು, ಶಾಂತಿ ಮತ್ತು ಭದ್ರತೆ ಕುರಿತು ಚರ್ಚೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದು ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರ ಎಂದು ಭಾರತವು ಹೇಳಿದೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಮುನ್ನಾದಿನವಾದ ಮಂಗಳವಾರ ಮೊಜಾಂಬಿಕ್ನ ಅಧ್ಯಕ್ಷತೆಯಲ್ಲಿ ನಡೆದಿದ್ದ ಚರ್ಚೆಯ ಸಂದರ್ಭದಲ್ಲಿ ಭುಟ್ಟೋ,ಮಹಿಳೆಯರು ಯುದ್ಧ ಮತ್ತು ಸಂಘರ್ಷಗಳಲ್ಲಿ ಪ್ರಮುಖ ಬಲಿಪಶುಗಳಾಗಿ ಮುಂದುವರಿದಿದ್ದಾರೆ. ವಿದೇಶಿ ಅತಿಕ್ರಮಣಗಳ ಮತ್ತು ಜನರ ಸ್ವಯಂ ನಿರ್ಣಯದ ಹಕ್ಕನ್ನು ದಮನಿಸುವ ಸಂದರ್ಭಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ ಅತಿಯಾದ ಅಪರಾಧಗಳು ನಡೆಯುತ್ತವೆ. ಇಲ್ಲಿ ನಾಗರಿಕ ಜನಸಂಖ್ಯೆಯ ದಮನ ಹಿಂಸಾಚಾರದ ಮುಖ್ಯ ಉದ್ದೇಶವಾಗಿರುತ್ತದೆ. ಇದು ಅತಿಕ್ರಮಿತ ಫೆಲೆಸ್ತೀನ್ ಭೂ ಭಾಗಗಳಲ್ಲಿ ಮತ್ತು ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಹೆಚ್ಚು ಸ್ಪಷ್ಟವಾಗಿದೆ ಎಂದು ಹೇಳಿದ್ದರು.
ಭುಟ್ಟೋ ಹೇಳಿಕೆಗಳನ್ನು ನಿರಾಧಾರ ಎಂದು ತಳ್ಳಿಹಾಕಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್ ಅವರು,'ಇಂತಹ ದುರುದ್ದೇಶದ ಮತ್ತು ಅಪಪ್ರಚಾರದ ಹೇಳಿಕೆಯು ಪ್ರತಿಕ್ರಿಯೆಗೂ ಅನರ್ಹ ಎಂದು ನಮ್ಮ ನಿಯೋಗವು ಪರಿಗಣಿಸಿದೆ ' ಎಂದು ಹೇಳಿದರು.