ಯುನೈಟೆಡ್ ನೇಷನ್ಸ್: ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಕಾರ್ಯಸೂಚಿಯ "ಕೇಂದ್ರ"ವಾಗಿಸಲು ಪಾಕಿಸ್ತಾನ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ ಎಂದು ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಒಪ್ಪಿಕೊಂಡಿದ್ದಾರೆ.
ಭಾರತವನ್ನು "ನಮ್ಮ ಸ್ನೇಹಿತ", "ನೆರೆಹೊರೆಯ" ದೇಶ ಎಂದು ಉಲ್ಲೇಖಿಸಿದ ಜರ್ದಾರಿ, "ವಿಶ್ವಸಂಸ್ಥೆಯಲ್ಲಿ ಕಾಶ್ಮೀರವನ್ನು ಕಾರ್ಯಸೂಚಿಯ ಕೇಂದ್ರವಾಗಿಸಲು ನಾವು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂಬುದನ್ನು ನೀವು ಗಮನಿಸಬೇಕು" ಎಂದಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪ್ಯಾಲೆಸ್ತೀನ್ ಮತ್ತು ಕಾಶ್ಮೀರದ ಪರಿಸ್ಥಿತಿ ನಡುವೆ ಸಾಮ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜರ್ದಾರಿ, ಕಾಶ್ಮೀರ ಕುರಿತು ಚರ್ಚೆಗೆ ನಮ್ಮ ನೆರೆಯ ದೇಶ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ. ಇದು ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗಬೇಕಾದ ವಿವಾದವಲ್ಲ ಎಂದು ಪ್ರತಿಪಾದಿಸುತ್ತದೆ ಎಂದರು.
ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪದೇ ಪದೇ ಕಾಶ್ಮೀರ ವಿಷಯ ಪ್ರಸ್ತಾಪಿಸುವ ಪಾಕಿಸ್ತಾನ ಈ ಬಗ್ಗೆ ಸದಸ್ಯ ರಾಷ್ಟ್ರಗಳ ಬೆಂಬಲ ಗಳಿಸಲು ವಿಫಲವಾಗುತ್ತಿದೆ. ಇದು, ಭಾರತ –ಪಾಕಿಸ್ತಾನಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯ ಎಂದೇ ಹಲವು ರಾಷ್ಟ್ರಗಳು ಪರಿಗಣಿಸಿವೆ.