ಕೊಚ್ಚಿ: ಮಲಯಾಳಂನ ಪ್ರಮುಖ ಸುದ್ದಿ ವಾಹಿನಿ ಏಷ್ಯಾನೆಟ್ ಕಚೇರಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಎಡ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಮತ್ತು ಸಿಪಿಐ(ಎಂ)ಯುವ ಘಟಕ ಡಿವೈಎಫ್‌ಐ ಹಿಂಸಾಚಾರದ ಬೆದರಿಕೆ ಹಾಕುತ್ತಿದ್ದು, ಸೂಕ್ತ ರಕ್ಷಣೆ ನೀಡುವಂತೆ ಕೋರಿ ಚಾನೆಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ನಗರೇಶ್ ಅವರು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಮಾರ್ಚ್ 3 ರಂದು ಸುಮಾರು 30 ಎಸ್‌ಎಫ್‌ಐ ಕಾರ್ಯಕರ್ತರು ಕೊಚ್ಚಿಯಲ್ಲಿರುವ ನಮ್ಮ ಕಚೇರಿಗೆ ನುಗ್ಗಿ ಗಲಾಟೆ ಮಾಡುವ ಮೂಲಕ ಸಿಬ್ಬಂದಿಯನ್ನು ಭಯಭೀತಗೊಳಿಸಿದ್ದಾರೆ ಎಂದು ಚಾನೆಲ್ ತನ್ನ ಅರ್ಜಿಯಲ್ಲಿ ಆರೋಪಿಸಿದೆ.
ದುಷ್ಕರ್ಮಿಗಳು ನಮ್ಮ ಕಚೇರಿ ಕೆಲಸಕ್ಕೆ ಅಡ್ಡಿಪಡಿಸಿದರು ಮತ್ತು ಸುಮಾರು ಒಂದು ಗಂಟೆಗಳ ಕಾಲ ಕೆಲಸ ನಿಲ್ಲಿಸಿದರು ಚಾನೆಲ್ ಆರೋಪಿಸಿದೆ.
ಏಷ್ಯಾನೆಟ್ ಅರ್ಜಿಯನ್ನು ಇತ್ಯರ್ಥಗೊಳಿಸಿದ ಹೈಕೋರ್ಟ್, ಚಾನೆಲ್ ನ ತಿರುವನಂತಪುರಂ, ಕೊಚ್ಚಿ, ಕೋಝಿಕ್ಕೋಡ್ ಮತ್ತು ಕಣ್ಣೂರು ಕಚೇರಿಗಳಿಗೆ ರಕ್ಷಣೆ ನೀಡುವಂತೆ ಸೂಚಿಸಿದೆ.
ಘರ್ಷಣೆ ಅಥವಾ ಹಿಂಸಾಚಾರದ ಸಂಭವವಿದ್ದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಸಹ ಹೈಕೋರ್ಟ್ ಆದೇಶಿಸಿದೆ.