ನವದೆಹಲಿ: ಹಳ್ಳಿ, ಪಟ್ಟಣ ಹಾಗೂ ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರಿನ ಸಂಸ್ಕರಣೆ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸುವ ಮೂಲಕ ಕೊಳಚೆ ನೀರಿನ ಸಂಸ್ಕರಣೆಯಲ್ಲಿ ಶೇ 100ರಷ್ಟು ಗುರಿ ಸಾಧಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಕೋರಿ ಉತ್ತರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
'ಸಂಸ್ಕರಿಸದೇ ಇರುವ ತ್ಯಾಜ್ಯ ನೀರನ್ನು ನದಿ ಹಾಗೂ ಹಳ್ಳ, ಕೊಳ್ಳಗಳಿಗೆ ಹರಿಸಲಾಗುತ್ತಿದೆ. ಆ ಮೂಲಕ ಜಲಮೂಲಗಳನ್ನೇ ಕಲುಷಿತಗೊಳಿಸಲಾಗುತ್ತಿದ್ದು, ಇದರ ಮೇಲೆ ಅವಲಂಬಿತವಾಗಿರುವ ನಾಗರಿಕರು ಹಾಗೂ ಜೀವ ವೈವಿಧ್ಯತೆಯು ಅಪಾಯಕ್ಕೆ ಸಿಲುಕಿದೆ' ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.
'ಉತ್ತರಪ್ರದೇಶದಲ್ಲಿ ಎಸ್‌ಟಿಪಿಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಅವುಗಳ ನಿರ್ವಹಣೆಗೆ ಅಗತ್ಯ ಅನುದಾನ ಒದಗಿಸಲಾಗುತ್ತಿದೆಯೇ, ಅವುಗಳ ಕಾರ್ಯಕ್ಷಮತೆ ಹೆಚ್ಚಿಸಲು ಸೂಕ್ತ ಕಾರ್ಯವಿಧಾನವನ್ನು ರೂಪಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ' ಎಂದು ನ್ಯಾಯಪೀಠವು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ (ಎನ್‌ಜಿಟಿ) ಸೂಚಿಸಿದೆ.
'ರಾಜ್ಯದಲ್ಲಿ ಪ್ರತಿ ದಿನ 5,500 ದಶಲಕ್ಷ ಲೀಟರ್ (ಎಂಎಲ್‌ಡಿ) ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ದೇಶದಲ್ಲೇ ಇದು ಅಧಿಕವಾಗಿದ್ದು, 2025ರ ಜೂನ್ ವೇಳೆಗೆ ಕೊಳಚೆ ನೀರಿನ ಸಂಸ್ಕರಣೆಯಲ್ಲಿ ಶೇ 100ರಷ್ಟು ಗುರಿ ಸಾಧಿಸಲಿದ್ದೇವೆ' ಎಂದು ಉತ್ತರಪ್ರದೇಶ ಸರ್ಕಾರವು ನ್ಯಾಯಪೀಠಕ್ಕೆ ತಿಳಿಸಿತು.