ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಮೂಲಕ ಪ್ರಯಾಣಿಸುವ ಸವಾರರಿಗೆ ಮುಂದಿನ ತಿಂಗಳಿಂದ ಪ್ರಯಾಣ ಬಲು ದುಬಾರಿಯಾಗಲಿದೆ. ಈ ಹೆದ್ದಾರಿಗಳಲ್ಲಿ ಪ್ರಯಾಣಿಸುವುದಕ್ಕೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗಬಹುದು. ಏಕೆಂದರೆ ಏಪ್ರಿಲ್ 1 ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ತೆರಿಗೆ ನೀತಿ ಪ್ರಕಾರ ಟೋಲ್ ದರಗಳು 5% ರಿಂದ 10% ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಪ್ರಕಾರ, ಶುಲ್ಕ ದರಗಳನ್ನು ಪ್ರತಿ ವರ್ಷ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ. ಅವಶ್ಯಕತೆಗಳನ್ನು ಅವಲಂಬಿಸಿ ನಿರ್ದಿಷ್ಟ ಟೋಲ್ ಸಮಸ್ಯೆಗಳ ಬಗ್ಗೆ ನೀತಿ ನಿರ್ಧಾರಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಲಾಗುತ್ತದೆ.
ಟೋಲ್ ದರ ಹೆಚ್ಚಳದ ಬಗ್ಗೆ ರಸ್ತೆ ಸಾರಿಗೆ ಸಚಿವಾಲಯವು ಈ ತಿಂಗಳ ಕೊನೆಯ ವಾರದೊಳಗೆ ಪ್ರಸ್ತಾವನೆಗಳನ್ನು ಪರಿಶೀಲಿಸಲಿದೆ. ಇದಾದ ನಂತರ ಬದಲಾದ ದರಗಳನ್ನು ಅನುಮೋದಿಸಬಹುದು. ಕಾರುಗಳು ಮತ್ತು ಲಘು ವಾಹನಗಳ ಟೋಲ್ ದರಗಳು ಶೇಕಡಾ ಐದು ಮತ್ತು ಇತರ ಭಾರೀ ವಾಹನಗಳ ಟೋಲ್ ದರಗಳು ಶೇಕಡಾ 10 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿರುವ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ದರವನ್ನು ಹೆಚ್ಚಿಸಲಾಗುವುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ, ದೆಹಲಿ -ಮುಂಬೈ ಎಕ್ಸ್‌ಪ್ರೆಸ್‌ವೇ ವಿಭಾಗದಲ್ಲಿ ಪ್ರತಿ ಕಿಲೋಮೀಟರ್‌ಗೆ 2.19 ರೂಪಾಯಿ ಟೋಲ್ ವಿಧಿಸಲಾಗುತ್ತಿದ್ದು, ಸುಮಾರು ಶೇ.10 ರಷ್ಟು ಏರಿಕೆಯಾಗಲಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಪ್ರಸ್ತುತ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿದಿನ ಸುಮಾರು 20 ಸಾವಿರ ವಾಹನಗಳು ಸಂಚರಿಸುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಇವುಗಳ ಸಂಖ್ಯೆ 50 ರಿಂದ 60 ಸಾವಿರಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ, ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ - ಮೀರತ್ ಎಕ್ಸ್‌ಪ್ರೆಸ್‌ವೇಗಳ ಟೋಲ್ ದರಗಳು ಹೆಚ್ಚಾಗುವ ಸಾಧ್ಯತೆಯಿದೆ. ಟೋಲ್ ಪ್ಲಾಜಾದ 20 ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸಾಮಾನ್ಯವಾಗಿ ಅಗ್ಗವಾಗಿರುವ ಮಾಸಿಕ ಪಾಸ್‌ನ ಸೌಲಭ್ಯವು 10% ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳು 2008 ರ ಪ್ರಕಾರ, ಬಳಕೆದಾರರ ಶುಲ್ಕ ಪ್ಲಾಜಾದ ನಿರ್ದಿಷ್ಟ ತ್ರಿಜ್ಯದೊಳಗೆ ವಾಸಿಸುವ ವ್ಯಕ್ತಿಗಳಿಗೆ ವಿನಾಯಿತಿಗಾಗಿ ಯಾವುದೇ ಅವಕಾಶವಿಲ್ಲ. ಆದರೂ, ಅನಿಯಮಿತ ಪ್ರವಾಸಗಳಿಗಾಗಿ 2022 - 23 ಹಣಕಾಸು ವರ್ಷಕ್ಕೆ ತಿಂಗಳಿಗೆ 315 ರೂಪಾಯಿ ದರದಲ್ಲಿ ಮಾಸಿಕ ಪಾಸ್ ಸೌಲಭ್ಯವು ವಾಣಿಜ್ಯೇತರ ಉದ್ದೇಶಗಳಿಗಾಗಿ ನೋಂದಾಯಿಸಲಾದ ವಾಹನವನ್ನು ಹೊಂದಿರುವ ಮತ್ತು 20 ಕಿಲೋಮೀಟರ್‌ಗಳ ಒಳಗೆ ವಾಸಿಸುವ ವ್ಯಕ್ತಿಗೆ ಲಭ್ಯವಿದೆ.
ಇತ್ತೀಚೆಗಷ್ಟೇ ಬೆಂಗಳೂರು -ಮೈಸೂರು ಎಕ್ಸ್‌ಪ್ರೇಸ್‌ವೇನಲ್ಲಿ ಟೀಲ್ ದರ ಜಾರಿಗೊಳಿಸಲು ಆದೇಶಿಸಿತ್ತು. ದರ ಹೆಚ್ಚಾದ ಹಿನ್ನೆಲೆ ಜನರಿಂದ ತೀವ್ರ ಆಕ್ರೋಶ ಉಂಟಾಗಿತ್ತು. ಇದೇ ಕಾರಣಕ್ಕೆ ಟೋಲ್ ಸಂಗ್ರಹ ಮುಂದೂಡಲಾಗಿದೆ. ಮಾರ್ಚ್ ೧೨ ರಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮಾಡಲಿದ್ದು, ಬಳಿಕ ಶುಲ್ಕ ಸಂಗ್ರಹ ಆರಂಭವಾಗುವ ಸಾಧ್ಯತೆಯಿದೆ.