ಕೊಲ್ಲಂ: ಇಂದಿನ ಕಾಲದಲ್ಲಿ ಶ್ರೀಮಂತರ ಮಕ್ಕಳು ಏನೆಲ್ಲ ಪುಂಡಾಟ ಮಾಡುತ್ತಾರೆ ಅಂತಾ ಪ್ರತಿನಿತ್ಯ ನಾವು ಮಾಧ್ಯಮಗಳಲ್ಲಿ ನೊಡುತ್ತಿರುತ್ತೇವೆ. ತಂದೆ-ತಾಯಿಯ ಹಣದಲ್ಲಿ ಮೋಜು-ಮಸ್ತಿ ಮಾಡಿಕೊಂಡು ಕಾಲಹರಣ ಮಾಡುತ್ತಾರೆ. ಸರಿಯಾಗಿ ಓದದೆ, ದುಶ್ಚಟಗಳಿಗೆ ದಾಸರಾಗಿ ಅನೇಕ ದುಷ್ಕೃತ್ಯಗಳನ್ನು ಎಸಗಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಕಷ್ಟದ ಹಾದಿಯನ್ನೇ ನೋಡದೇ ಸುಲಭವಾಗಿ ಹಣ ಪಡೆಯುವ ಬಹುತೇಕರು ಅಡ್ಡದಾರಿಯನ್ನೇ ಹಿಡಿಯುತ್ತಾರೆ. ಆದರೆ, ನಾವು ಹೇಳ ಹೊರಟಿರುವ ಸ್ಟೋರಿ ಇದಕ್ಕೆ ತದ್ವಿರುದ್ಧವಾಗಿದೆ.
ತಂದೆ ಓರ್ವ ಸಿಬಿಐ ಅಧಿಕಾರಿ. ಹಣಕ್ಕೇನು ಕೊರತೆ ಇಲ್ಲ. ತಂದೆಯ ಬುಲೆಟ್ನಲ್ಲೇ ನಿತ್ಯವು ಕಾಲೇಜಿಗೆ ಹೋಗುವ ಯುವತಿ ರಜಾ ದಿನಗಳಲ್ಲಿ ಚಾಲಕಿಯಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಾಳೆ. ಇದರ ಹಿಂದಿರುವ ಉದ್ದೇಶ ತನ್ನ ಓದಿನ ಖರ್ಚಿಗೆ ಮನೆಯವರನ್ನು ಅವಲಂಬಿಸದೇ ತಾನೇ ಸಂಪಾದಿಸಬೇಕೆಂಬುದು.
ನೀವು ಮೇಲೆ ನೋಡುತ್ತಿರುವ ಫೋಟೋದಲ್ಲಿರುವ ಯುವತಿಯ ಹೆಸರು ರೂಪಾ. 25 ವರ್ವದ ರೂಪಾ ಕೇರಳದ ಚವಾರಾ ಮೂಲದ ನಿವಾಸಿ. ಕೊಲ್ಲಂನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಪಿಜಿ ಡಿಪ್ಲೊಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಓದುತ್ತಿದ್ದಾರೆ. ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ತರಗತಿಗಳಿಗೆ ಹಾಜರಾಗುತ್ತಾರೆ. ಉಳಿದ ದಿನಗಳಲ್ಲಿ ಚಾಲಕಿಯಾಗಿ ತಮ್ಮ ಓದಿನ ಖರ್ಚಿನ ಜೊತೆಗೆ ಮನೆಯ ಆರ್ಥಿಕ ಭಾರವನ್ನು ಇಳಿಸುವ ಮೂಲಕ ಆದರ್ಶ ಯುವತಿಯಾಗಿದ್ದಾಳೆ. ಅಂದಹಾಗೆ ರೂಪಾ ಅವರು ಕೊಲ್ಲಂ ಕೇರಳಪುರಂ ತೆಕೆವಿಲ್ಲಾ ಮೂಲದ ಸಿಬಿಐ ಅಧಿಕಾರಿ ಪ್ರದೀಪ್ ಮತ್ತು ಸುಮಾ ಅವರ ಹಿರಿಯ ಪುತ್ರಿ.
ರೂಪಾ ಚಿಕ್ಕಂದಿನಿಂದಲೂ ಡ್ರೈವಿಂಗ್ ಮೇಲೆ ಆಸಕ್ತಿ ಹೊಂದಿದ್ದಾರೆ. ಕೊಲ್ಲಂನ ಎಸ್‌ಎನ್ ಮಹಿಳಾ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗಲೇ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದರು. ಕಳೆದ ವರ್ಷ ಅವರಿಗೆ ಹೆವಿ ಲೈಸನ್ಸ್ ಸಿಕ್ಕಿದೆ. ಫೆಬ್ರವರಿ ಆರಂಭದಲ್ಲಿ ಅವರು ತಾತ್ಕಾಲಿಕ ಡ್ರೈವಿಂಗ್ ಕೆಲಸವನ್ನು ಸೇರಿಕೊಂಡು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಂದು ವರ್ಷದ ಡಿಪ್ಲೊಮಾಗೆ ತಂದೆ ಮೊದಲ ಕಂತಿನ ಶುಲ್ಕವನ್ನು ಪಾವತಿಸಿದರು. ನಂತರದ ಎಲ್ಲ ಖರ್ಚಿನ ಹಣವನ್ನು ತಾನೇ ದುಡಿದು ಹೊಂದಿಸಬೇಕು ಅಂತ ನಿರ್ಧರಿಸಿದರು. ಮನೆಯಲ್ಲಿ ಈ ವಿಷಯವನ್ನು ತಿಳಿಸಿದಾಗ ಪೋಷಕರು ಕೂಡ ಬೆಂಬಲವಾಗಿ ನಿಂತರು. ತನ್ನ ಸ್ನೇಹಿತ ಬಸ್ ಮಾಲೀಕನಿಂದ ತಂದೆ ಕೆಲಸ ಕೊಡಿಸಿದರು.
ವಾಹನ ಚಲಾಯಿಸಿ ರಾತ್ರಿ ವಾಪಸಾಗುವಾಗ ರೂಪಾ ಅವರು ಅಗತ್ಯ ಗೃಹೋಪಯೋಗಿ ವಸ್ತುಗಳನ್ನೂ ಖರೀದಿಸಿ ತರುತ್ತಾರೆ. ಕೆಲವೊಮ್ಮೆ ಸ್ವಲ್ಪ ಮೊತ್ತವನ್ನು ತಂದೆ ಮತ್ತು ತಾಯಿಗೆ ನೀಡುತ್ತಾರೆ. ಹಗಲು ಕೆಲಸ ಮಾಡಿ, ರಾತ್ರಿನ ಓದಿನ ಕಡೆ ಗಮನ ಕೊಡುತ್ತಾರೆ. ಕೇರಳಾಪುರಂ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ, ಕೊಲ್ಲಂ ಎಸ್‌ಎನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ ತಿರುವನಂತಪುರದಲ್ಲಿ ಒಂದು ವರ್ಷದ ನಾಗರಿಕ ಸೇವಾ ತರಬೇತಿಯನ್ನು ಪಡೆದಿದ್ದಾರೆ. ಇಷ್ಟೇ ಅಲ್ಲದೆ, ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಎಂಎ ಪತ್ರ ವ್ಯವಹಾರ ಕೋರ್ಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಬೇಕು. ಎಲ್ಲದಕ್ಕೂ ಹೆತ್ತವರ ಮೇಲೆ ಅವಲಂಬಿತರಾಗಬಾರದು ಎನ್ನುವುದಕ್ಕೆ ರೂಪಾ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.