ವಾಷಿಂಗ್‌ಟನ್: ಸಂಕಷ್ಟದಲ್ಲಿ ಸಿಲುಕಿರುವ ಅಮೆರಿಕದ ಟೆಕ್ ವಲಯದ ವಿದೇಶಿ ಉದ್ಯೋಗಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರಲ್ಲಿ ಭಾರತೀಯರೇ ಗಣನೀಯ ಸಂಖ್ಯೆಯಲ್ಲಿದ್ದು, ಹೆಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳು ಅಮೆರಿಕದಲ್ಲಿ ಕೆಲಸ ಮಾಡಬಹುದು ಎಂದು ಅಮೆರಿಕದ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದಾರೆ.
ಹೆಚ್ -1ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳಿಗೆ ಸೈದ್ದಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.
ಹೆಚ್ -1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ (ಪತಿ ಅಥವಾ ಪತ್ನಿ) ಉದ್ಯೋಗದ ಅಧಿಕೃತ ಕಾರ್ಡ್ ನೀಡುವ ಒಬಾಮಾ ಆಡಳಿತಾವಧಿಯ ನಿಯಮಗಳನ್ನು ವಜಾಗೊಳಿಸುವಂತೆ ಕೋರಿ ಅಮೆರಿಕದ ಸೇವ್ ಜಾಬ್ಸ್ ಯುಎಸ್ ಎ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಯುಎಸ್ ಜಿಲ್ಲಾ ನ್ಯಾಯಾಧೀಶರಾದ ತಾನ್ಯಾ ಚುಟ್ಕಾನ್, ಹೆಚ್-1ಬಿ ವೀಸಾ ಹೊಂದಿರುವವರ ಸಂಗಾತಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದು ಎಂದು ತೀರ್ಪು ನೀಡಿದರು.
ಸೇವ್ ಜಾಬ್ಸ್ ಯುಎಸ್ ಎ ಎಂಬುದು ಐಟಿ ಉದ್ಯೋಗಿಗಳನ್ನು ಒಳಗೊಂಡಿರುವ ಸಂಸ್ಥೆಯಾಗಿದೆ. ಅಮೆಜಾನ್, ಆಪಲ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ನಂತಹ ಕಂಪನಿಗಳು ಸೇವ್ ಜಾಬ್ಸ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಅಮೆರಿಕ ಇದುವರೆಗೂ ಹೆಚ್-1 ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಸುಮಾರು 1,00, 000 ಕೆಲಸ ನೀಡಿದೆ.