ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್ ದೃಢಪಟ್ಟ 3,016 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದೀಗ ದಾಖಲಾಗಿರುವ ಹೊಸ ಪ್ರಕರಣಗಳ ಸಂಖ್ಯೆ ಕಳೆದ ಆರು ತಿಂಗಳಲ್ಲೇ ಅಧಿಕವಾಗಿದೆ.
2022 ಅಕ್ಟೋಬರ್‌ನಲ್ಲಿ 2ರಂದು ದಾಖಲಾದ 3,375 ಕೋವಿಡ್ ಪ್ರಕರಣಗಳು ಇಲ್ಲಿವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.47 ಕೋಟಿಗೆ (4,47,12,692) ಏರಿಕೆಯಾಗಿದೆ. ಆ ಪೈಕಿ 5,30,862 ಮಂದಿ ಸಾವಿಗೀಡಾಗಿದ್ದಾರೆ.
ಕೋವಿಡ್‌ನಿಂದಾಗಿ ಬುಧವಾರ ಕೇರಳದಲ್ಲಿ 8, ಮಹಾರಾಷ್ಟ್ರದಲ್ಲಿ 3, ದೆಹಲಿಯಲ್ಲಿ 2, ಹಾಗೂ ಹಿಮಾಚಲ ಪ್ರದೇಶದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,509ಕ್ಕೆ ಏರಿಕೆಯಾಗಿದೆ.
ಪಾಸಿಟಿವಿಟಿ ದರ ಶೇ 1.71 ರಷ್ಟಿದರೆ, ಚೇತರಿಕೆ ಪ್ರಮಾಣ ಶೇ 98.78 ರಷ್ಟಿದೆ. ಉಳಿದಂತೆ ಸಾವಿನ ಪ್ರಮಾಣ ಶೇ 1.19 ರಷ್ಟಿದೆ. ದೇಶದಾದ್ಯಂತ ಇದುವರೆಗೆ 220.65 ಕೋಟಿ ಕೋವಿಡ್ ಡೋಸ್ ಲಸಿಕೆ ವಿತರಿಸಲಾಗಿದೆ.