ಚಂಡೀಗಢ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು 1988ರ ರೋಡ್ ರೇಜ್ ಪ್ರಕರಣದಲ್ಲಿ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ನಂತರ ಶನಿವಾರ ಪಟಿಯಾಲ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮಾಜಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ಇಂದು ಮಧ್ಯಾಹ್ನದ ವೇಳೆಗೆ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಸಂಜೆ 5:53ಕ್ಕೆ ಜೈಲಿನಿಂದ ಹೊರಬಂದರು. ಈ ವೇಳೆ ಸಿಧುನೀಲಿ ಬಣ್ಣದ ಜಾಕೆಟ್ ಧರಿಸಿದ್ದರು.
59 ವರ್ಷದ ಕಾಂಗ್ರೆಸ್ ನಾಯಕನ ಬೆಂಬಲಿಗರು ಜೈಲಿನ ಹೊರಗೆ ಬೆಳಗ್ಗೆಯಿಂದಲೇ ಜಮಾಯಿಸಿದ್ದು, ಬಿಡುಗಡೆಯಾದ ಮೇಲೆ ಅವರಿಗೆ ಭವ್ಯವಾದ ಸ್ವಾಗತ ಕೋರಿದರು ಮತ್ತು 'ನವಜೋತ್ ಸಿಧು ಜಿಂದಾಬಾದ್' ಎಂದು ಘೋಷಣೆ ಕೂಗಿದರು.
ಸಿಧು ಅವರು 1988ರಲ್ಲಿ ರಸ್ತೆಯಲ್ಲಿ ದಾಂಧಲೆ ನಡೆಸಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುರ್ನಮ್ ಅವರು ನಂತರ ಮೃತಪಟ್ಟಿದ್ದರು. ಪ್ರಕಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.