ಠಾಣೆ: ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಯಾನೆ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಪ್ರದಾನ ಮಾಡಿದ 'ಮಹಾರಾಷ್ಟ್ರ ಭೂಷಣ ಪ್ರಶಸ್ತಿ' ಸಮಾರಂಭದಲ್ಲಿ ಭಾಗವಹಿಸಿದ್ದವರಲ್ಲಿ 11 ಮಂದಿ ಸುಡು ಬಿಸಿಲಿನ ಝಳದಿಂದ ಮೃತಪಟ್ಟಿದ್ದಾರೆ.
ಭಾನುವಾರ ನವಿ ಮುಂಬೈನ ಖಾರ್‌ಘರ್‌ನಲ್ಲಿ ಸಮಾರಂಭ ನಡೆದಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಕೂಡ ಈ ಕಾರ್ಯಕ್ರಮದಲ್ಲಿದ್ದರು.
123ಕ್ಕೂ ಹೆಚ್ಚು ಜನರು ಸುಡು ಬಿಸಿಲಿಗೆ ಬಸವಳಿದು ನಿರ್ಜಲೀಕರಣ, ಆಯಾಸದಂತಹ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿ ಅಸ್ವಸ್ಥರಾದರು. ಕೂಡಲೇ ಇವರಲ್ಲಿ ಕೆಲವರನ್ನು ನವಿ ಮುಂಬೈನ ವಾಶಿ ಸೇರಿ ವಿವಿಧೆಡೆ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಅಸ್ವಸ್ಥರ ಪೈಕಿ 11 ಜನರು ಮೃತಪಟ್ಟಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಚಿಕಿತ್ಸೆ ಪಡೆಯುತ್ತಿರುವವರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರನ್ನು ವಿಚಾರಿಸಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಟ್ವೀಟ್ ಮಾಡಿದ್ದಾರೆ.
ಖಾರ್‌ಘರ್‌ನಲ್ಲಿ ಸುಮಾರು 306 ಎಕರೆ ಮೈದಾನದಲ್ಲಿ ನಡೆದ ಈ ಸಮಾರಂಭದಲ್ಲಿ ಧರ್ಮಾಧಿಕಾರಿ ಅವರ ಲಕ್ಷಾಂತರ ಸಂಖ್ಯೆಯ ಅನುಯಾಯಿಗಳು ಪಾಲ್ಗೊಂಡಿದ್ದರು.
ಬೆಳಿಗ್ಗೆ 11.30ಕ್ಕೆ ಶುರುವಾದ ಈ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆವರೆಗೂ ನಡೆಯಿತು.