ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಸೈಬರ್ ಭದ್ರತೆ ಎಚ್ಚರಿಕೆಯ ಪ್ರಕಾರ, ಇಂಡೋನೇಶ್ಯಾ ಮೂಲದ ಸೈಬರ್ ದಾಳಿ ಗುಂಪೊಂದು ಭಾರತದ 12,000 ಸರ್ಕಾರಿ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡಿದೆ ಎಂದು moneycontrol.com ವರದಿ ಮಾಡಿದೆ.
ಈ ಎಚ್ಚರಿಕೆಯನ್ನು ಗುರುವಾರ ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಹಯೋಗ ಕೇಂದ್ರ (I4C) ಹೊರಡಿಸಿದೆ ಎಂದು ವರದಿಯಾಗಿದೆ.
ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳನ್ನು ಆಗ್ರಹಿಸಿರುವ ಈ ಎಚ್ಚರಿಕೆಯು, "ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳನ್ನು ಭಾರಿ ಪ್ರಮಾಣದಲ್ಲಿ ಗುರಿಯಾಗಿಸಿಕೊಳ್ಳಲಾಗಿದೆ ಎಂಬ ವರದಿಗಳಿವೆ" ಎಂದು ಹೇಳಿದೆ.
ಕಳೆದ ವರ್ಷ ಸೈಬರ್ ದಾಳಿಗೆ ಒಳಗಾಗಿದ್ದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS)ಯು, ತನ್ನ ಕೇಂದ್ರೀಕೃತ ದಾಖಲೆಗಳಿಗೆ ಪ್ರವೇಶ ಪಡೆಯುವುದಕ್ಕೆ ಸಮಸ್ಯೆ ಎದುರಿಸಿತ್ತು. ಇದರೊಂದಿಗೆ ಇನ್ನಿತರ ಆಸ್ಪತ್ರೆ ಸೇವೆಯೂ ವ್ಯತ್ಯಯಗೊಂಡಿತ್ತು.