ನವದೆಹಲಿ: ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗುವುದರೊಂದಿಗೆ, ಹೊಸ ನಿಯಮಗಳು ಸಹ ಜಾರಿಗೆ ಬಂದಿವೆ. ತೆರಿಗೆ ಪಾವತಿದಾರರು ಜುಲೈ 31 ರ ಮೊದಲು ಐಟಿಆರ್ (ITR) ಅನ್ನು ಸಲ್ಲಿಸಬೇಕು. ಫಾರ್ಮ್-16 ಅನ್ನು ಪೂರ್ಣಗೊಳಿಸಬೇಕು ಮತ್ತು ವೆಚ್ಚಗಳ ವಿವರಗಳನ್ನು ಬಹಿರಂಗಪಡಿಸಬೇಕು.
ಐಟಿಆರ್ ಅನ್ನು ಸಲ್ಲಿಸುವ ಮೊದಲು, ನೀವು ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುದನ್ನು ನೆನಪಿನಲ್ಲಿಡುವುದು ಅಗತ್ಯವಾಗಿದೆ. ಮ್ಯೂಚುವಲ್ ಫಂಡ್‌ಗಳಿಂದ ಸ್ಥಿರ ಠೇವಣಿಗಳವರೆಗೆ, ನಿಮಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ನಿಮ್ಮ ಸಂಬಳ ರೂ.12 ಲಕ್ಷಗಳಾಗಿದ್ದರೆ, ನೀವು ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ. ಇಲ್ಲಿದೆ ಹೆಚ್ಚಿನ ಮಾಹಿತಿ.
ತೆರಿಗೆ ಉಳಿಸಲು ಖಂಡಿತವಾಗಿಯೂ ಮುಂಗಡ ಯೋಜನೆ ಅಗತ್ಯವಿದೆ. ನಿಮ್ಮ ಸಂಬಳದಿಂದ ತೆರಿಗೆ ಮೊತ್ತವನ್ನು ಕಡಿತಗೊಳಿಸಿದರೆ, ನೀವು ಐಟಿಆರ್ ಸಲ್ಲಿಸಿ ಆ ಹಣವನ್ನು ಮತ್ತೆ ಪಡೆಯಬಹುದು. ನಿಮ್ಮ ಸಂಬಳ ವಾರ್ಷಿಕ 12 ಲಕ್ಷ ಆಗಿದ್ದರೆ, ಶೇ. 30 %ರಷ್ಟು ತೆರಿಗೆ ಕಟ್ಟಬೇಕು. ವಾರ್ಷಿಕ ಆದಾಯ ರೂ.10 ಲಕ್ಷಕ್ಕಿಂತ ಹೆಚ್ಚು ಇರುವವರು ಶೇ.30 ತೆರಿಗೆ ಪಾವತಿಸಬೇಕು. 12 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವುದು ಉತ್ತಮ.
ಪ್ರತಿ ಕಂಪನಿಯು ಉದ್ಯೋಗಿಗಳಿಗೆ 2 ರೀತಿಯ ಸಂಬಳವನ್ನು ನೀಡುತ್ತದೆ. ವೇತನವನ್ನು ಭಾಗ-ಎ, ಭಾಗ-ಬಿ ಅಥವಾ ಭಾಗ-1, ಭಾಗ-2 ಎಂದು ವಿಂಗಡಿಸಲಾಗುತ್ತದೆ. ಭಾಗ-ಎ ಅಥವಾ ಭಾಗ-1 ಸಂಬಳದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ರೂ.12 ಲಕ್ಷ ಸಂಬಳದಲ್ಲಿ ರೂ.2 ಲಕ್ಷವು ಭಾಗ-ಬಿ ಅಥವಾ ಭಾಗ-II ನಲ್ಲಿರುತ್ತದೆ. ಆಗ ತೆರಿಗೆಗೆ ಒಳಪಡುವ ಆದಾಯ 10 ಲಕ್ಷ ರೂ. ಆಗುತ್ತದೆ.
ಹಣಕಾಸು ಸಚಿವಾಲಯ ನೀಡಿರುವ 50 ಸಾವಿರ ಸ್ಟಾಂಡರ್ಡ್ ಡಿಡಕ್ಷನ್ ತೆಗೆದುಕೊಂಡರೆ ತೆರಿಗೆಗೆ ಒಳಪಡುವ ಆದಾಯ ರೂ.9.50 ಲಕ್ಷಕ್ಕೆ ಇಳಿಕೆಯಾಗಲಿದೆ.
ನೀವು ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ರೂ.1.5 ಲಕ್ಷದವರೆಗೆ ಉಳಿತಾಯವನ್ನು ಕ್ಲೈಮ್ ಮಾಡಬಹುದು. ಬೋಧನಾ ಶುಲ್ಕ, ಎಲ್‌ಐಸಿ, ಪಿಪಿಎಫ್, ಮ್ಯೂಚುವಲ್ ಫಂಡ್, ಇಪಿಎಫ್ ಅಥವಾ ಹೋಮ್ ಲೋನ್ ಇತ್ಯಾದಿಗಳನ್ನು ಕ್ಲೈಮ್ ಮಾಡಬಹುದು. ರೂ.1.5 ಲಕ್ಷಗಳನ್ನು ಕಡಿತಗೊಳಿಸಿದರೆ, ತೆರಿಗೆಯ ಆದಾಯವು ರೂ.8 ಲಕ್ಷಗಳಾಗಿರುತ್ತದೆ.
ಆದಾಯ ತೆರಿಗೆಯ ಸೆಕ್ಷನ್ 24B ಅಡಿಯಲ್ಲಿ, ಗೃಹ ಸಾಲದ ಬಡ್ಡಿಯ ಮೇಲೆ ರೂ.2 ಲಕ್ಷದ ಕಡಿತ ಲಭ್ಯವಿದೆ. ಆಗ ನಿಮ್ಮ ತೆರಿಗೆಯ ಆದಾಯವು ರೂ.6 ಲಕ್ಷಕ್ಕೆ ಕಡಿಮೆಯಾಗುತ್ತದೆ.
80CCD (1B) ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) 50 ಸಾವಿರ ಹೂಡಿಕೆ ಮಾಡಿದ್ರೆ ಈಗ ಆದಾಯ ತೆರಿಗೆ 5.5 ಲಕ್ಷ ರೂ. ಆಗುತ್ತದೆ.
ಆದಾಯ ತೆರಿಗೆಯ ಸೆಕ್ಷನ್ 80D ಅಡಿಯಲ್ಲಿ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕ್ಲೈಮ್ ಮಾಡಬಹುದು. ಮಕ್ಕಳು ಮತ್ತು ಪತ್ನಿಗೆ ರೂ.25 ಸಾವಿರದವರೆಗೆ, ಪೋಷಕರು ಹಿರಿಯ ನಾಗರಿಕರಾಗಿದ್ದರೆ ರೂ.50 ಸಾವಿರ ಪ್ರೀಮಿಯಂ ಕ್ಲೈಮ್ ಮಾಡಬಹುದು. ಈ ಎರಡನ್ನು ರೂ.75 ಸಾವಿರ ಕಡಿಮೆ ಮಾಡಿದರೆ, ನಿಮ್ಮ ತೆರಿಗೆಯ ಆದಾಯ ರೂ.4.75 ಲಕ್ಷವಾಗುತ್ತದೆ.
ರೂ.2.5 ಲಕ್ಷದಿಂದ ರೂ.4.75 ಲಕ್ಷದವರೆಗಿನ ಆದಾಯದ ಮೇಲೆ ಶೇ.5ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅದರಂತೆ ರೂ.2.25 ಲಕ್ಷಕ್ಕೆ ರೂ.11,250 ತೆರಿಗೆ ಪಾವತಿಸಬೇಕು. ಆದರೆ ಹಣಕಾಸು ಸಚಿವಾಲಯವು 12,500 ರೂ.ವರೆಗೆ ತೆರಿಗೆಯಲ್ಲಿ ರಿಯಾಯಿತಿ ನೀಡುತ್ತದೆ. ಈ ರೀತಿಯಾಗಿ, ನೀವು ರೂ.12 ಲಕ್ಷ ಸಂಬಳದ ಮೇಲೆ ತೆರಿಗೆ ಪಾವತಿಸುವ ಅಗತ್ಯವಿಲ್ಲ.