ಕಾಸರಗೋಡು: ಕಷ್ಟಕಾಲದಲ್ಲಿ ಜತೆಗೆ ನಿಲ್ಲುವವನೇ ನಿಜವಾದ ಸ್ನೇಹಿತ ಎಂಬ ಮಾತಿಗೆ ತಾಜಾ ಉದಾಹರಣೆಯಂತಿದೆ ಈ ಘಟನೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಫೇಸ್ಬುಕ್ ಸ್ನೇಹಿತನ ಪ್ರಾಣ ಉಳಿಸಲು ಶಿಕ್ಷಕರೊಬ್ಬರು ಬರೋಬ್ಬರಿ 16 ಲಕ್ಷ ರೂಪಾಯಿಯನ್ನು ಸಂಗ್ರಹ ಮಾಡಿದ್ದಾರೆ.
ಶಿಕ್ಷಕರು ಹಾಗೂ ಕುಟುಂಬಶ್ರೀ ರಾಜ್ಯ ಮಿಷನ್ ಕಾರ್ಯಕ್ರಮ ಅಧಿಕಾರಿಯಾಗಿರುವ ರತೀಶ್ ಪಿಲಿಕೋಡ್ ಅವರು ತಮ್ಮ ಫೇಸ್ಬುಕ್ ಸ್ನೇಹಿತನ ಪ್ರಾಣ ಉಳಿಸಲು ಪುಸ್ತಕದ ಕಪಾಟುಗಳನ್ನು ಮಾರಿ 16 ಲಕ್ಷ ರೂ. ಸಂಗ್ರಹಿಸಿದ್ದಾರೆ.
ಪುಸ್ತಕದ ಕಪಾಟು ತಯಾರಿ
ತ್ರಿಸ್ಸೂರ್ ಮೂಲದ ಅಕ್ಕಸಾಲಿಗ
ಪ್ರತೀಶ್ ಅವರಿಗಾಗಿ ರತೀಶ್ ಹಣ ಸಂಗ್ರಹಿಸಿದ್ದಾರೆ. ಪ್ರತೀಶ್ ಅವರ ತಾಯಿ ಶೋಭನಾ
ಮತ್ತು ತಂದೆ ಪರಮೇಶ್ವರನ್ ಅವರು ದಾನ ಮಾಡಿದ ಕಿಡ್ನಿಗಳು ನಿಷ್ಕ್ರಿಯಗೊಂಡಿವೆ. ಆರು
ತಿಂಗಳ ಹಿಂದೆ ಪ್ರತೀಶ್ ಸಹೋದರ ಪ್ರದೀಪ್ ಸಹ ಕಿಡ್ನಿ ದಾನ ಮಾಡಿದ್ದರು. ಮೊದಲ
ಮೂತ್ರಪಿಂಡ ಕಸಿ 16 ವರ್ಷಗಳ ಹಿಂದೆಯೇ ನಡೆದಿತ್ತು. ಮೂರು ಕಿಡ್ನಿ ಕಸಿಗೆ 30 ಲಕ್ಷ ರೂ.
ಮತ್ತು ಔಷಧಿಗಳಿಗೆ ತಿಂಗಳಿಗೆ 1. 15 ಲಕ್ಷ ರೂ. ಖರ್ಚಾಗುತ್ತದೆ. ಪ್ರತೀಶ್ ಬಾಡಿಗೆ
ಮನೆಯಲ್ಲಿ ವಾಸವಿದ್ದು, ಸ್ನೇಹಿತರ ಸಹಕಾರದಿಂದ ಆರು ತಿಂಗಳ ಹಿಂದೆಯೇ ಪುಸ್ತಕದ
ಕಪಾಟುಗಳನ್ನು ತಯಾರಿಸಲು ಆರಂಭಿಸಿದ್ದರು.
ಕಪಾಟ ಮಾರಾಟ ಮನವಿ
ಒಂದೂವರೆ ವರ್ಷಗಳ ಹಿಂದೆಯೇ ಪ್ರತೀಶ್ ಫೇಸ್‌ಬುಕ್‌ನಲ್ಲಿ ತಮ್ಮ ಕಷ್ಟದ ಬಗ್ಗೆ
ಬರೆದುಕೊಂಡಿದ್ದರು. ಅದನ್ನು ನೋಡಿದ ರತೀಶ್ ಸಹಾಯಕ್ಕೆ ಮುಂದೆ ಬಂದರು. ತಾವು ತಯಾರಿಸುವ
ಪುಸ್ತಕದ ಕಪಾಟನ್ನು ಮಾರಾಟ ಮಾಡಿಕೊಡುವಂತೆ ಪ್ರತೀಶ್, ರತೀಶ್ ಅವರ ಬಳಿ ಮನವಿ
ಮಾಡಿದರು. ಕೊಂಚವೂ ಯೋಚಿಸದೇ ಒಪ್ಪಿಕೊಂಡ ರತೀಶ್, ಪುಸ್ತಕದ ಕಪಾಟು ಮಾರಾಟ ಮತ್ತು ಅದರ
ಹಿಂದಿರುವ ಉದ್ದೇಶವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದರು. ಇದಾದ ಬಳಿಕ ಜನರು
ರತೀಶ್ ಅವರನ್ನು ಸಂಪರ್ಕಿಸಲು ಪ್ರಾರಂಭಿಸಿದರು.
ರತೀಶ್ ನೆರವು
ರತೀಶ್, ಪ್ರತೀಶ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿಯೇ ಇಲ್ಲ. ಪ್ರತೀಶ್ ಅವರ ಕಿರಿಯ
ಸಹೋದರ ಪ್ರದೀಪ್ ಪುಸ್ತಕದ ಕಪಾಟುಗಳೊಂದಿಗೆ ಲಾರಿಯಲ್ಲಿ ಬರುತ್ತಾರೆ. ನಂತರ ರತೀಶ್ ಅದೇ
ವಾಹನದಲ್ಲಿ ಪ್ರಯಾಣಿಸಿ ಕಪಾಟನ್ನು ತನ್ನ ಸ್ನೇಹಿತರಿಗೆ ಮಾರುತ್ತಾರೆ. ಈವರೆಗೆ ಒಟ್ಟು
743 ಪುಸ್ತಕದ ಕಪಾಟುಗಳು ಮಾರಾಟವಾಗಿದ್ದು, 16 ಲಕ್ಷ ರೂ. ಸಂಗ್ರಹವಾಗಿದೆ.
ಸೇವಾ ಮನೋಭಾವ
ಚಾರಿಟಿ ಕಾರ್ಯದಲ್ಲಿ ಸದಾ ಸಕ್ರಿಯರಾಗಿರುವ ರತೀಶ್, ತಮ್ಮ ವಿದ್ಯಾರ್ಥಿನಿ ಅಖಿಲಾಗೆ 2016ರಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿದ್ದರು. ಇನ್ನಿಬ್ಬರು ವಿದ್ಯಾರ್ಥಿಗಳ ಮನೆ ನಿರ್ಮಾಣವನ್ನು ಪೂರ್ಣಗೊಳಿಸಲೂ ಸಹಾಯ ಮಾಡಿದ್ದಾರೆ. ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 19 ವರ್ಷಗಳ ಸೇವೆಯ ನಂತರ ರತೀಶ್ ಕುಟುಂಬಶ್ರೀ ಮಿಷನ್‌ನ ಭಾಗವಾಗಿದ್ದಾರೆ.