ದುಬೈ: ಇಲ್ಲಿನ ಅಲ್ ರಾಸ್ ವಸತಿ ಕಟ್ಟಡದ 4ನೇ ಮಹಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೇರಳ ಮೂಲದ ಇಬ್ಬರು ಸೇರಿದಂತೆ 16 ಮಂದಿ ದುರಂತ ಸಾವಿಗೀಡಾಗಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಮಧ್ಯರಾತ್ರಿ 12 ಗಂಟೆಗೆ ದುಬೈನ ತಲಾಲ್ ಸೂಪರ್ ಮಾರ್ಕೆಟ್ ಬಳಿ ಇರುವ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ.ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗಾರ ಕಲಂಗದನ್ ಮೂಲದ ರಿಜೇಶ್ (38) ಮತ್ತು ಅವರ ಪತ್ನಿ ಜೇಶಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರಲ್ಲಿ ತಮಿಳುನಾಡು ಮೂಲದ ಅಬ್ದುಲ್ ಖಾದರ್ ಮತ್ತು ಸಲಿಯಾಕುಂದ್, ಪಾಕಿಸ್ತಾನದ ಮೂವರು ಮತ್ತು ನೈಜೀರಿಯಾದ ಮಹಿಳೆ ಸೇರಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ದಟ್ಟ ಹೊಗೆ ರಿಜೇಶ್ ಅವರು ವಾಸವಿದ್ದ ಕೊಠಡಿಗೂ ವ್ಯಾಪಿಸಿ, ದಂಪತಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಿಜೇಶ್ ಅವರು ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಜೇಶಿ ದುಬೈನ ಕ್ರೆಸೆಂಟ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿ ಕೂಡ ಬೆಂಕಿಯಲ್ಲಿ ಮೃತಪಟ್ಟಿದ್ದಾರೆ. ಮೃತರ ಎಲ್ಲ ದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಸಾಮಾಜಿಕ ಕಾರ್ಯಕರ್ತ ನಾಸೀರ್ ವತನಪಲ್ಲಿ ಮಾಹಿತಿ ನೀಡಿದ್ದಾರೆ.
ದುಬೈ ಪೊಲೀಸರು, ದುಬೈನಲ್ಲಿರುವ ಭಾರತೀಯ ದೂತಾವಾಸ, ಇತರ ರಾಜತಾಂತ್ರಿಕ ನಿಯೋಗಗಳು ಮತ್ತು ಮೃತರ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇನೆ ಎಂದು ನಾಸೀರ್ ವತನಪಲ್ಲಿ ಅವರು ಹೇಳಿದರು.