ನವದೆಹಲಿ: ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ಆಸ್ತಿ ನಾಶ ಉಂಟಾಗಿರುವ ಬಗ್ಗೆ ಮೌಲ್ಯಮಾಪನ ಮಾಡಲು ಮತ್ತು ಗಾಯಗೊಂಡವರಿಗೆ ಪರಿಹಾರ ನೀಡಲು ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್ ಮತ್ತು ತೆಲಂಗಾಣ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 17ರಂದು ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ.
'ಹಿಂದೂ ಫ್ರಂಟ್ ಫಾರ್ ಜಸ್ಟೀಸ್' ಸಂಘಟನೆಯ ಪರವಾಗಿ ವಕೀಲರಾದ ವಿಷ್ಣು ಶಂಕರ್ ಜೈನ್ ಮತ್ತು ಹರಿಶಂಕರ್ ಜೈನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ದಿನಾಂಕವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಅಧ್ಯಕ್ಷತೆಯ ನ್ಯಾಯಪೀಠವು ನಿಗದಿಪಡಿಸಿದೆ.
'ಸ್ವತಂತ್ರ ಭಾರತಲ್ಲಿ ಹಿಂದೂಗಳಿಗೆ ಶಾಂತಿಯುತವಾಗಿ ಧಾರ್ಮಿಕ ಮೆರವಣಿಗೆ ನಡೆಸಲು ಅನುಮತಿ ನೀಡದಿರುವುದು ದುರದೃಷ್ಟಕರ. ಇಂತಹ ಸಂದರ್ಭಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳು ವಿಫಲವಾಗಿವೆ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.
'ಗಲಭೆಕೋರರಿಂದ ನಷ್ಟ ವಸೂಲಿ ಮಾಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು' ಎಂದೂ ಕೋರಲಾಗಿದೆ.
'ರಾಮನವಮಿ ದಿನದಂದು ಮತ್ತು ಇತರ ಸಂದರ್ಭಗಳಲ್ಲಿ ಹಿಂದೂಗಳು ನಡೆಸುವ ಧಾರ್ಮಿಕ ಮೆರವಣಿಗೆಗಳಿಗೆ' ಸೂಕ್ತ ಭದ್ರತೆ ಒದಗಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.