ನವದೆಹಲಿ: ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಚಿಲ್ಲರೆ ಮಾರಾಟ ದರ ಆಧರಿಸಿ ಜಿಎಸ್ಟಿ ಸೆಸ್ (ಹೆಚ್ಚುವರಿ ತೆರಿಗೆ) ಅನ್ನು ಸರ್ಕಾರ ನಿಗದಿ ಮಾಡಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಇದುವರೆಗೆ ಜಾಹೀರಾತು ಮೌಲ್ಯದ (ಆಡ್ ವಲೋರೆಂ) ಮೇಲೆ ಶೇಕಡಾ 28ಕ್ಕಿಂತ ಅಧಿಕ ಜಿಎಸ್ಟಿ ಹೇರುವ ಪದ್ಧತಿ ಜಾರಿಯಲ್ಲಿತ್ತು.
ಹಣಕಾಸು ಸಚಿವಾಲಯದ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಪಾನ್ ಮಸಾಲಾ ಪೊಟ್ಟಣದ ಮೇಲಿನ ಚಿಲ್ಲರೆ ಮಾರಾಟ ದರಕ್ಕೆ (ಆರ್ಎಸ್ಪಿ) ಶೇ. 0.32 ರಷ್ಟು ಜಿಎಸ್ಟಿ ಸೆಸ್ ಅನ್ವಯವಾಗಲಿದೆ. ತಂಬಾಕು ಗುಟ್ಖಾ ಹೊಂದಿರುವ ಪಾನ್ ಮಸಾಲಾ ಸದ್ಯಕ್ಕೆ ಆರ್ಎಸ್ಪಿಯ ಶೇ. 0.61 ರಷ್ಟು ಸೆಸ್ ದರ ಒಳಗೊಂಡಿದೆ. ಆದರೆ, ಪೈಪ್ ಮತ್ತು ಸಿಗರೇಟ್ಗಳಿಗೆ ಸ್ಮೋಕಿಂಗ್ ಮಿಶ್ರಣದ ದರ ಶೇ. 0.69 ಆಗಿದೆ.
ಅಗಿಯುವ ತಂಬಾಕು, ಫಿಲ್ಟರ್ ಖೈನಿ ಮತ್ತು ಜರ್ದಾ ಸುವಾಸಿತ ತಂಬಾಕುಗಳಿಗೆ ಆರ್ಎಸ್ಪಿಯ ಶೇ. 0.56ರಷ್ಟು ಸೆಸ್ ವಿಧಿಸಲಾಗುತ್ತದೆ. ಬ್ರಾಂಡೆಡ್ ಅನ್ವ್ಯಾನುಫ್ಯಾಕ್ಚರ್ಡ್ ತಂಬಾಕು ಮತ್ತು ಹುಕ್ಕಾ ಅಥವಾ ಗುಟ್ಖಾಗೆ (ಗುಡಕು) ಈ ದರ ಆರ್ಎಸ್ಪಿಯ ಶೇ. 0.36 ರಷ್ಟು ಆಗಿದೆ.
ಆರ್ಎಸ್ಪಿ ಆಧಾರಿತ ಲೆವಿ ಪದ್ಧತಿಯಲ್ಲಿ, ಉತ್ಪಾದಕರು ಮಸಾಲಾ ಮತ್ತು ಅಗಿಯುವ ತಂಬಾಕುಗಳು ಫ್ಯಾಕ್ಟರಿಯಿಂದ ರವಾನೆ ಆಗುವ ವೇಳೆ ಅಂತಿಮ ಚಿಲ್ಲರೆ ದರದ ಮೇಲಿನ ಸೆಸ್ ಪಾವತಿಸಬೇಕು. ಆರಂಭಿಕ ಹಂತದಲ್ಲೇ ತೆರಿಗೆಯನ್ನು ಸಂಗ್ರಹಿಸುವುದರಿಂದ ತೆರಿಗೆಗಳ್ಳತನ ತಡೆಯಲು ನೆರವಾಗುತ್ತದೆ. ಒಂದು ವೇಳೆ ಸರಬರಾಜು ಸರಪಣಿ ಕಡಿತಗೊಂಡರೂ ಸರ್ಕಾರಕ್ಕೆ ಹೆಚ್ಚು ಸ್ಥಿರವಾದ ಆದಾಯ ಮೂಲವನ್ನು ಆರ್ಎಸ್ಪಿ ಆಧಾರಿತ ವ್ಯವಸ್ಥೆ ಒದಗಿಸುತ್ತದೆ ಎಂದು ಎಎಂಆರ್ಜಿ ಆಂಡ್ ಅಸೋಸಿಯೇಟ್ಸ್ನ ಹಿರಿಯ ಪಾಲುದಾರ ರಜತ್ ಮೋಹನ್ ಅಭಿಪ್ರಾಯಪಟ್ಟಿದ್ದಾರೆ.
ಪಾನ್ ಮಸಾಲಾ ಮತ್ತು ತಂಬಾಕು ಮೇಲಿನ ಆರ್ಎಸ್ಪಿ ಆಧಾರಿತ ಸೆಸ್ ಬಹುತೇಕ ಹಿಂದಿನ ಆಡ್-ವಲೋರೆಂ ವ್ಯವಸ್ಥೆಯಲ್ಲಿದ್ದ ದರವೇ ಆಗಿರುತ್ತದೆ. ಆದರೆ, ಹಿಂದಿನ ವ್ಯವಸ್ಥೆಯಲ್ಲಿ ತೆರಿಗೆ ತಪ್ಪಿಸಿಕೊಳ್ಳಲು ಅವಕಾಶವಿತ್ತು ಹಾಗೂ ಅದರ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿತ್ತು.
ಸರ್ಕಾರ ಕಳೆದ ತಿಂಗಳು ಜಿಎಸ್ಟಿ ಕಾನೂನಿಗೆ ತಿದ್ದುಪಡಿ ತಂದು ಪಾನ್ ಮಸಾಲಾ, ಸಿಗರೇಟ್ಗಳು ಮತ್ತು ತಂಬಾಕಿನ ಇತರ ಸ್ವರೂಪಗಳ ಮೇಲೆ ಹೇರುವ ಜಿಎಸ್ಟಿ ಸೆಸ್ನ ಗರಿಷ್ಠ ದರವನ್ನು ಜಾರಿಗೊಳಿಸಿತ್ತು.
ಪಾನ್ ಮಸಾಲಾಕ್ಕೆ ಗರಿಷ್ಠ ಜಿಎಸ್ಟಿ ಸೆಸ್ ದರ ತಲಾ ಯುನಿಟ್ಗೆ ಆರ್ಎಸ್ಪಿಯ ಶೇಕಡ 51 ಆಗುತ್ತದೆ. ಮಾರ್ಚ್ 31ರ ವರೆಗೆ ಆಡ್-ವಲೋರೆಂನ ಗರಿಷ್ಠ ಶೇಕಡ 135 ದರವನ್ನು ವಿಧಿಸಲಾಗುತ್ತಿತ್ತು. ತಂಬಾಕಿಗೆ ತಲಾ 1,000 ಕಡ್ಡಿಗಳಿಗೆ 4,170 ರೂಪಾಯಿ ಗರಿಷ್ಠ ದರವನ್ನು ಹಾಗೂ ಶೇ. 290 ಆಡ್-ವಲೋರೆಂ ಅಥವಾ ಪ್ರತಿ ಘಟಕದ ಚಿಲ್ಲರೆ ಮಾರಾಟದ ಶೇ. 100 ನಿಗದಿಪಡಿಸಲಾಗಿದೆ.
ಪಾನ್ ಮಸಾಲಾ ಮತ್ತು ಗುಟ್ಖಾ ವ್ಯವಹಾರದಲ್ಲಿ ಆಗುತ್ತಿರುವ ತೆರಿಗೆ ಕಳ್ಳತನ ತಡೆಯಲು ರಾಜ್ಯ ಹಣಕಾಸು ಸಚಿವರ ಸಮಿತಿ ಮಾಡಿದ್ದ ಶಿಫಾರಸನ್ನು ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆ ಅನುಮೋದಿಸಿತ್ತು. ಪಾನ್ ಮಸಾಲಾ ಮತ್ತು ಅಗಿಯುವ ತಂಬಾಕು ಮೇಲಿನ ಸೆಸ್ ವಿಧಿಸುವ ವ್ಯವಸ್ಥೆಯನ್ನು ಆಡ್-ವೆಲೋರಂನಿಂದ ನಿರ್ದಿಷ್ಟ ದರ ಆಧಾರಿತ ಲೆವಿಗೆ ಬದಲಾಯಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಆರಂಭದ ಹಂತದಲ್ಲೇ ಆದಾಯ ಸಂಗ್ರಹ ಹೆಚ್ಚಳಕ್ಕೆ ಇದರಿಂದ ಇಂಬು ಸಿಗುತ್ತದೆಂಬುದು ಸಮಿತಿಯ ಅಭಿಪ್ರಾಯವಾಗಿತ್ತು.