ಲುಧಿಯಾನ: ಕಾರು ತಡೆಯಲು ಯತ್ನಿಸಿದ ಟ್ರಾಫಿಕ್ ಪೊಲೀಸ್‌ಗೆ ಗುದ್ದಿ, ಬಾನೆಟ್ ಮೇಲೆ ಬಿದ್ದ ಪೊಲೀಸ್ ಅನ್ನು ಚಾಲಕ ಒಂದು ಕಿ.ಮೀ ಎಳೆದೊಯ್ದಿರುವ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು.
ಇಬ್ಬರೂ ಅಪರಾಧ ಹಿನ್ನೆಲೆಯುಳ್ಳವರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ ಟ್ರಾಫಿಕ್ ಪೊಲೀಸ್ ಬಾನೆಟ್ ಮೇಲೆ ಮಲಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದ್ದಿದ್ದು ಕಂಡುಬಂದಿದೆ.
ಲುಧಿಯಾನದ ಪಾಲಿಕೆ ಕಚೇರಿ ಬಳಿಯ ಮಾತಾ ರಾಣಿ ಚೌಕ್‌ನಲ್ಲಿ ಘಟನೆ ನಡೆದಿದೆ.
ಟ್ರಾಫಿಕ್ ಕೆಲಸದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಹರ್ದೀಪ್ ಸಿಂಗ್, ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ, ಸಂಕೇತ ಧಿಕ್ಕರಿಸಿ ಮುನ್ನುಗಿದ ಕಾರು, ಪೊಲೀಸ್‌ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಆತ ಬಾನೆಟ್ ಮೇಲೆ ಬಿದ್ದಿದ್ದಾನೆ. ಬಳಿಕ, ಚಾಲಕ ಜಲಂಧರ್ ಪಾಸ್‌ಗೆ ಕಡೆಗೆ ಸುಮಾರು 1 ಕಿ.ಮೀ ಕಾರನ್ನು ಡ್ರೈವ್ ಮಾಡಿಕೊಂಡು ತೆರಳಿದ್ದಾನೆ. ಟ್ರಾಫಿಕ್ ಹೆಚ್ಚಿದ್ದ ಕಾರಣ ಕಾರನ್ನು ಸ್ಲೋ ಮಾಡಿದಾಗ ಟ್ರಾಫಿಕ್ ಪೊಲೀಸ್ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಾರಿನಲ್ಲಿದ್ದವರ ಗುರುತು ಪತ್ತೆಯಾಗಿದ್ದು, ಶೀಘ್ರ ಬಂಧಿಸುವುದಾಗಿ ಲುಧಿಯಾನ ಎಸಿಪಿ ರಮಣ್‌ದೀಪ್ ಸಿಂಗ್ ಹೇಳಿದ್ದಾರೆ.