ಮಲಪ್ಪುರಂ: ಕೇರಳದ ಕೋಝಿಕ್ಕೋಡ್ ವಿಮಾನನಿಲ್ದಾಣದಲ್ಲಿ ಗುರುವಾರ ರಾತ್ರಿ ಚಿನ್ನದ ಕಳ್ಳಸಾಗಣೆ ಯತ್ನದ ನಾಲ್ಕು ವಿಭಿನ್ನ ಪ್ರಕರಣಗಳಲ್ಲಿ 2 ಕೋಟಿ ರೂ. ಮೌಲ್ಯದ 3.5 ಕೆ.ಜಿ. ಚಿನ್ನವನ್ನು ಏರ್ಕಸ್ಟಮ್ಸ್ ಬೇಹುಗಾರಿಕಾ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜಿದ್ದಾದಿಂದ ಆಗಮಿಸಿದ ಮಲಪ್ಪುರಂ ನಿವಾಸಿ ರಹಮಾನ್ (43) ಎಂಬಾತನಿಂದ 1107 ಗ್ರಾಂ. ಚಿನ್ನದ ಮಿಶ್ರಣವನ್ನು ಒಳಗೊಂಡ ನಾಲ್ಕು ಕ್ಯಾಪ್ಸೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನದ ಮಿಶ್ರಣದ ನಾಲ್ಕು ಕ್ಯಾಪ್ಸೂಲ್ ಗಳನ್ನು ತನ್ನ ದೇಹದೊಳಗೆ ಬಚ್ಟಿಟ್ಟು ಕಳ್ಳಸಾಗಣೆಗೆ ಯತ್ನಿಸಿದ ಮಲಪ್ಪುರಂನ ಕರುಲೈನ ನಿವಾಸಿ ಮುಹಮ್ಮದ್ ಉವೈಸಿ(30) ಎಂಬಾತನನ್ನು ಕೂಡಾ ಏರ್ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದರ ಜೊತೆಗೆ ಏರ್ ಆರೇಬಿಯ ವಿಮಾನದಲ್ಲಿ ಅಬುದಾಭಿಯಿಂದ ಆಗಮಿಸಿದ ಕೋಝಿಕ್ಕೋಡ್ ನ ಕೂಡರಂಜಿ ನಿವಾಸಿ ಉನ್ನಿಚಾಲ್ ಮೆದಾಲ್ ವಿಜಿತ್ (29) ನಿಂದ ಚಿನ್ನ ಮಿಶ್ರಣವಿರುವ ನಾಲ್ಕು ಕ್ಯಾಪ್ಸೂಲ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆತ ತನ್ನ ದೇಹದೊಳಗೆ ಮತ್ತು ಕಾಲುಚೀಲದಲ್ಲಿ ಅವುಗಳನ್ನು ಬಚ್ಚಿಟ್ಟುಕೊಂಡಿದ್ದನು.
ನಾಲ್ಕನೇ ಪ್ರಕರಣದಲ್ಲಿ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈಯಿಂದ ಆಗಮಿಸಿದ ಮಲಪ್ಪುರಂ ನಿವಾಸಿ ಒಝಕುನ್ನತ್ ಶಫೀಕ್ (27) ಎಂಬಾತ ತನ್ನ ಕೈಬ್ಯಾಗ್ ನಲ್ಲಿ 901 ಗ್ರಾಂ ಚಿನ್ನವನ್ನು ಅವಿತಿರಿಸಿದ್ದುದು ಪತ್ತೆಯಾಗಿದೆ.
ವಶಪಡಿಸಿಕೊಂಡ ಚಿನ್ನದ ಮಿಶ್ರಣದಿಂದ ಚಿನ್ನವನ್ನು ತೆಗೆಯುವ ಸಂಸ್ಕರಣಾ ಕಾರ್ಯವನ್ನು ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಪ್ರಯಾಣಿಕರನ್ನು ಬಂಧಿಸಿ, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.