ನವದೆಹಲಿ: ಹೈಸ್ಪೀಡ್ ರೈಲುಗಳ ಸಂಚಾರಕ್ಕಾಗಿ ಪ್ರತ್ಯೇಕ ಮಾರ್ಗಗಳನ್ನು ನಿರ್ವಿುಸುವ ಉದ್ದೇಶ ಹೊಂದಿರುವ ಭಾರತೀಯ ರೈಲ್ವೆ, ಇದರ ಭಾಗವಾಗಿ ತಾಸಿಗೆ 220 ಕಿ.ಮೀ. ವೇಗದಲ್ಲಿ ಸಂಚರಿಸಲು ಸಾಧ್ಯವಾಗುವಂತಹ ಪರೀಕ್ಷಾರ್ಥ ಹಳಿಗಳನ್ನು ವಾಯವ್ಯ ರೈಲ್ವೆ ವಲಯದ ಜೋಧಪುರ್ ವಿಭಾಗದಲ್ಲಿ ನಿರ್ವಿುಸುತ್ತಿದೆ.
ರಾಜಸ್ಥಾನದ ಗುಧಾ-ಥಥಾನಾ ಮಿಠರಿ ನಿಲ್ದಾಣಗಳ ಮಧ್ಯೆ 59 ಕಿ.ಮೀ. ಉದ್ದ ಈ ಹಳಿಗಳು ಅಂತಾರಾಷ್ಟ್ರೀಯ ಗುಣಮಟ್ಟದ ಸಮಗ್ರ ಪರೀಕ್ಷಾ ಮಾರ್ಗವಾಗಿದ್ದು, ಇಂಥದನ್ನು ನಿರ್ವಿುಸುತ್ತಿರುವ ಮೊದಲ ದೇಶ ಭಾರತ ಆಗಿದೆ.
ಈ ಮಾರ್ಗದಲ್ಲಿ ಸೆಮಿ ಹೈಸ್ಪೀಡ್ ರೈಲಾಗಿರುವ ವಂದೇ ಭಾರತ್ ಎಕ್ಸ್ಪ್ರೆಸ್ಗಳ ವೇಗವನ್ನು ಪರೀಕ್ಷಿಸಲಾಗುವುದು. ಈ ಮಾರ್ಗದಲ್ಲಿ 23 ಕಿ.ಮೀ. ಉದ್ದ ಮುಖ್ಯ ಮಾರ್ಗವಿದ್ದು, 13 ಕಿ.ಮೀ. ಉದ್ದದ ಉಪಮಾರ್ಗಗಳು (ಲೂಪ್) ಇವೆ. ನವಾ ಎಂಬಲ್ಲಿ ಮೂರು ಕಿ.ಮೀ. ಉದ್ದದ ವೇಗವರ್ಧಿತ ಲೂಪ್ ಇದ್ದರೆ, ಮಿಠರಿಯಲ್ಲಿ 20 ಕಿ.ಮೀ. ಉದ್ದದ ತಿರುವು (ಕರ್ವ್)ಗಳ ಪರೀಕ್ಷೆಯ ಮಾರ್ಗ ಇದೆ. ಈ ಮಾರ್ಗದ ಮೊದಲ ಹಂತದ ಕಾಮಗಾರಿ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದ್ದು, ಎರಡನೇ ಹಂತ ಕಾರ್ಯಗಳು 2024ರ ಡಿಸೆಂಬರ್ಗೆ ಮುಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಾಯವ್ಯ ರೈಲ್ವೆ ವಲಯದ ಸಿಪಿಆರ್ಒ ಕ್ಯಾಪ್ಟನ್ ಶಶಿಕಿರಣ್ ತಿಳಿಸಿದ್ದಾರೆ.
ವೇಗವಾಗಿ ಸಂಚರಿಸುವಾಗ ಹಳಿ ಬದಲಾವಣೆ ವೇಳೆ ರೈಲಿನ ಗಾಲಿಗಳ ಕ್ಷಮತೆ, ಡಿಕ್ಕಿಯಾದರೆ ಅದರ ಪರಿಣಾಮ, ವೇಗದಲ್ಲಿ ರೈಲಿನ ಸ್ಥಿರತೆ, ತಿರುವುಗಳಲ್ಲಿ ಬೋಗಿಗಳ ಪ್ರತಿರೋಧಕ ಕ್ಷಮತೆ ಇನ್ನಿತರ ಅಂಶಗಳ ಸಮಗ್ರ ಅಧ್ಯಯನ ಈ ಮಾರ್ಗದಲ್ಲಿ ನಡೆಯಲಿದೆ. ಸದ್ಯ ಭಾರತದಲ್ಲಿ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗ ತಾಸಿಗೆ 160 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಬಹುದಾದ ಪಥವೆಂದು ಗುರುತಿಸಲಾಗಿದೆ.