ಥಾಣೆ: ಕಾರನ್ನು ತಡೆಯಲು ಯತ್ನಿಸಿ, ಬಾನೆಟ್ ಮೇಲೆ ಸಿಲುಕಿಕೊಂಡ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಚಾಲಕ ಸುಮಾರು 20 ಕಿ.ಮೀ. ವರೆಗೆ ಹೊತ್ತೊಯ್ದಿರುವ ಅಮಾನವೀಯ ಘಟನೆ ನವಿ ಮುಂಬೈನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಈ ಅವಘಡಕ್ಕೆ ಕಾರಣನಾದ ಚಾಲಕ ಆದಿತ್ಯ ಬೆಂಬ್ಡೆ(22) ಎಂಬಾತ ಮಾದಕ ವಸ್ತು ಸೇವಿಸಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಸಿದ್ದೇಶ್ವರ ಮಾಲಿ(37) ಅವರು ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ವಾಹನಗಳ ಪರಿಶೀಲನೆಯಲ್ಲಿ ಅವರು ತೊಡಗಿದ್ದರು. ಈ ವೇಳೆ ಕಾರೊಂದನ್ನು ಸಿದ್ದೇಶ್ವರ ಅವರು ತಡೆಯಲು ಯತ್ನಿಸಿದ್ದಾರೆ. ಆದರೆ, ಕಾರು ನಿಲ್ಲಿಸದ ಕಾರಣ ಪೊಲೀಸ್ ಸಿಬ್ಬಂದಿ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರನ್ನು 20 ಕಿ.ಮೀ. ತನಕ ಹಾಗೆಯೇ ಹೊತ್ತೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾರು ಚಾಲಕನನ್ನು ಮಾದಕ ವ್ಯಸನ ಹಾಗೂ ಕೊಲೆ ಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದೂ ಅವರು ಹೇಳಿದರು.