ನವದೆಹಲಿ: ಮೂರು ತಿಂಗಳೊಳಗಿನ ಮಗುವನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳುವ ಮಹಿಳೆಯು ತಾಯ್ತನದ ರಜೆಗೆ ಅರ್ಹಳು ಎಂಬ ಮಾತೃತ್ವ ಸೌಲಭ್ಯ ಕಾಯ್ದೆ- 1961ರ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಏಪ್ರಿಲ್ 28ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂಬ ವಕೀಲರೊಬ್ಬರ ಕೋರಿಕೆಯನ್ನು ಪರಿಗಣಿಸಿ, ಈ ಸಮ್ಮತಿ ನೀಡಿತು.
ಕಾಯ್ದೆಯ ಸೆಕ್ಷನ್ 5(4)ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕದ ಹಂಸಾನಂದಿನಿ ನಂದೂರಿ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
'ಈ ಕಾಯ್ದೆಯು ಜೈವಿಕ ತಾಯಂದಿರಿಗೆ 26 ವಾರಗಳ ಹೆರಿಗೆ ರಜೆಯ ಪ್ರಯೋಜನ ನೀಡುತ್ತದೆ. ಆದರೆ, ದತ್ತುಪಡೆವ ತಾಯಂದಿರಿಗೆ ಕೇವಲ 12 ವಾರ ರಜೆ ನೀಡುತ್ತದೆ. ಅಷ್ಟೇ ಅಲ್ಲ, 3 ತಿಂಗಳು ಮೀರಿದ ಅನಾಥ ಮಕ್ಕಳನ್ನು ದತ್ತು ಪಡೆಯುವವರಿಗೂ 12 ವಾರದ ರಜೆ ಮಾತ್ರ ದೊರೆಯುತ್ತದೆ. ಹಾಗಾಗಿ, ಈ ಕಾಯ್ದೆಯು ಜೈವಿಕ ತಾಯಂದಿರು ಮತ್ತು ದತ್ತು ತಾಯಂದಿರಲ್ಲಿ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ' ಎಂದು ಅರ್ಜಿದಾರರು ಅರ್ಜಿಯಲ್ಲಿ ವಿವರಿಸಿದ್ದಾರೆ.
ಈ ಅರ್ಜಿ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕೇಂದ್ರ ಕಾನೂನು ಸಚಿವಾಲಯಕ್ಕೆ 2021ರ ಅಕ್ಟೋಬರ್ 1ರಂದು ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು.