ನವದೆಹಲಿ: ತಾವು ಚುನಾವಣೆ ಸಮಯದಲ್ಲಿ ಸಲ್ಲಿಸುವ ನಾಮಪತ್ರಗಳಲ್ಲಿ ಸಲ್ಲಿಸಿರುವ ವಿವರಗಳ ಪ್ರಕಾರ ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಾಧಿಪತಿಗಳು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫರ್ಮ್ಸ್(ADR) ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್ನಲ್ಲಿ ತಿಳಿಸಲಾಗಿದೆ ಎಂದು ADR ಹಾಗೂ ಎಲೆಕ್ಷನ್ ವಾಚ್ ಬಿಡುಗಡೆ ಂಆಡಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ.
ವಿವಿಧ ರಾಜ್ಯಗಳ 30 ಮುಖ್ಯಮಂತ್ರಿಗಳ ಪೈಕಿ 29(ಶೇ.97ರಷ್ಟು) ಮಂದಿ ಕೋಟ್ಯಾಧಿಪತಿಗಳಾಗಿದ್ದು ಪ್ರತಿ ಸಿಎಂನ ಆಸ್ತಿ ಸರಾಸರಿ 33.96 ಕೋಟಿ ರೂ.ಮೌಲ್ಯ ಎಂದು ಹೇಳಲಾಗಿದೆ.
30 ಜನ ಮುಖ್ಯಮಂತ್ರಿಗಳ ಪೈಕಿ 13(ಶೇ.43 ರಷ್ಟು) ಮಂದಿ ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಜಾಮೀನು ರಹಿತ ಅಪರಾಧ, ಜೈಲು ಶಿಕ್ಷೆಯ ಬಗ್ಗೆಯೂ ತಿಳಿಸಲಾಗಿದೆ.
ಕರೋಡ್ಪತಿ ಮುಖ್ಯಮಂತ್ರಿಗಳು ಪೈಕಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ(510 ಕೋಟಿ ರೂಪಾಯಿ) ಮೊದಲ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಂಡು(163 ಕೋಟಿ ರೂಪಾಯಿ), ಓಡಿಶಾದ ನವೀನ್ ಪಟ್ನಾಯಕ್(63 ಕೋಟಿ ರೂಪಾಯಿ) ಮೌಲ್ಯದ ಆಸ್ತಿ ಹೊಂದಿದ್ದಾರೆ.
ಅತ್ಯಂತ ಕಡಿಮೆ ಆಸ್ತಿ ಘೋಷಿಸಿರುವವರ ಪೈಕಿ ಕೇರಳದ ಪಿಣರಾಯಿ ವಿಜಯನ್(1 ಕೋಟಿ ರೂಪಾಯಿ), ಹರಿಯಾಣದ ಮನೋಹರ್ ಲಾಲ್ ಖಟ್ಟರ್(1 ಕೋಟಿ ರೂಪಾಯಿ), ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ(15 ಲಕ್ಷ ರೂಪಾಯಿ) ಮೌಲ್ಯದ ಆಸ್ತಿ ಹೊಂದಿದ್ದಾರೆ.