ತಿರುವನಂತಪುರ: ಕೊಕಾಕೋಲಾ ಕಂಪೆನಿ ಪಾಲಕ್ಕಾಡ್ ಜಿಲ್ಲೆಯ ಪ್ಲಾಚಿಮಾಡದಲ್ಲಿ ತನ್ನ ವಶದಲ್ಲಿರುವ 35 ಎಕರೆ ಭೂಮಿ ಮತ್ತು ಕಟ್ಟಡವನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.
ಹಿಂದೂಸ್ತಾನ್ ಕೊಕಾಕೋಲಾ ಬಿವರೇಜ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜುವಾನ್ ಪಾಬ್ಲೊ ರಾಡ್ರಿಗಸ್ ಟ್ರೊವ್ಯಾಟೊ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ಪ್ಲಾಚಿಮಾಡದಲ್ಲಿರುವ ಭೂಮಿ ಹಾಗೂ ಕಟ್ಟಡವನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸುವ ಕಂಪೆನಿಯ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು ಎಂದು ಮುಖ್ಯಮಂತ್ರಿ ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ರೈತರ ನೇತೃತ್ವದಲ್ಲಿ ಶೀಘ್ರದಲ್ಲಿ ಆರಂಭವಾಗಲಿರುವ ಪ್ರಸ್ತಾವಿತ ರೈತ ಉತ್ಪಾದಕ ಸಂಘಟನೆ (ಎಫ್ಪಿಒ)ಗೆ ಕಂಪೆನಿ ವಶದಲ್ಲಿರುವ ಜಮೀನು ಬಿಡುಗಡೆ ಮಾಡಲು ಸರಕಾರ ಈಗಾಗಲೇ ಮಾತುಕತೆ ಆರಂಭಿಸಿದೆ. ವಿದ್ಯುತ್ ಸಚಿವ ಕೆ. ಕೃಷ್ಣನ್ಕುಟ್ಟಿ ನೇತೃತ್ವದಲ್ಲಿ ನಡೆದ ಮಾತುಕತೆಯ ಅಂತ್ಯದಲ್ಲಿ ಕೊಕಾಕೋಲಾ ಕಂಪೆನಿ ಭೂಮಿ ಹಸ್ತಾಂತರಿಸಲು ಸಿದ್ಧವಾಯಿತು ಎಂದು ಹೇಳಿಕೆ ತಿಳಿಸಿದೆ.
ಅಲ್ಲಿನ ರೈತರಿಗೆ ಪ್ರಾತ್ಯಕ್ಷಿಕೆ ಹೊಲ ನಿರ್ಮಾಣ ಮಾಡಲು ತಾಂತ್ರಿಕ ನೆರವು ನೀಡುವುದಾಗಿ ಕೂಡ ಕೊಕಾಕೋಲಾ ಕಂಪೆನಿ ತಿಳಿಸಿದೆ ಎಂದು ಮುಖ್ಯ ಮಂತ್ರಿ ಕಚೇರಿ ಗುರುವಾರ ತಡ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಪರಿಸರ ಮಾಲಿನ್ಯ ಹಾಗೂ ಅಂತರ್ಜಲ ದುರ್ಬಳಕೆ ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲಿ ಕೋಕಾಕೋಲಾ ಕಂಪೆನಿ ಪ್ಲಾಚಿಮಾಡಲ್ಲಿರುವ ತನ್ನ ಘಟಕವನ್ನು 2004 ಮಾರ್ಚ್ ನಲ್ಲಿ ಮುಚ್ಚಿತ್ತು.