ನವದೆಹಲಿ: 'ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಇಲ್ಲಿಯವರೆಗೂ ಶೇ 40ರಷ್ಟು ಗ್ರಾಮಗಳು ಒಡಿಎಫ್ ಪ್ಲಸ್ (ಬಯಲು ಶೌಚ ಮುಕ್ತ) ವರ್ಗಕ್ಕೆ ಸೇರಿವೆ ಎಂದು ಘೋಷಿಸಲಾಗಿದೆ. ಶೇ 33ರಷ್ಟು ಗ್ರಾಮಗಳು ಈ ಗುರಿಯನ್ನು ಸಾಧಿಸುವತ್ತ ಮುನ್ನಡೆಯುತ್ತಿವೆ' ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಶುಕ್ರವಾರ ತಿಳಿಸಿದರು.
'ಮುಂದಿನ ಆರ್ಥಿಕ ವರ್ಷದ ವೇಳೆಗೆ 50 ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ಒಡಿಎಫ್ ಪ್ಲಸ್ ವರ್ಗಕ್ಕೆ ಸೇರಿಸುವ ಗುರಿಯನ್ನು ಹೊಂದಲಾಗಿದೆ' ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
'ಈ ಗುರಿ ಸಾಧಿಸುವಲ್ಲಿ ಮಾಡುವಲ್ಲಿ ತೆಲಂಗಾಣ (ಶೇ 100), ತಮಿಳುನಾಡು (ಶೇ 95) ಹಾಗೂ ಕರ್ನಾಟಕ (ಶೇ 93.5) ರಾಜ್ಯಗಳು ಅತ್ಯುತ್ತಮ ಸಾಧನೆ ಮಾಡಿವೆ' ಎಂದು ವಿವರಿಸಿದರು.
ಬಯಲು ಶೌಚ ಮುಕ್ತ ಸ್ಥಿತಿಯನ್ನು ಉಳಿಸಿಕೊಳ್ಳುವ, ಸಮರ್ಪಕವಾಗಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಮಾಡುವ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ರಾಜ್ಯಗಳಿಗೆ ಒಡಿಎಫ್-ಪ್ಲಸ್ ಸ್ಥಾನವನ್ನು ನೀಡಲಾಗುತ್ತದೆ.