ಕಾಸರಗೋಡು: ಉಡುಪಿ ಕಾಸರಗೋಡು 400 ಕೆವಿ ಪ್ರಸರಣ ಮಾರ್ಗ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಸಮಾಲೋಚನಾ ಸಭೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭಾನುವಾರ ಜರುಗಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್‍ಚಂದ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಕಾಸರಗೋಡು 400 ಕೆವಿ ಪ್ರಸರಣ ಮಾರ್ಗವು ಏಳು ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗುತ್ತಿದ್ದು, ಈ ಪ್ರದೇಶದ ಜನತೆ ಹಾಗೂ ಜನಪ್ರತಿನಿಧಿಗಳ ಸಂದೇಹ ಮತ್ತು ಸಂಶಯಗಳಿಗೆ ಯುಕೆಟಿಎಲ್ ಕಂಪನಿ ಅಧಿಕಾರಿಗಳು ಉತ್ತರಿಸಿದರು. ಲೈನ್ ಹಾದು ಹೋಗುವ ಪ್ರದೇಶಗಳಲ್ಲಿ ಅಗತ್ಯವಿರುವ ಪರಿಹಾರ ಮತ್ತು ವಶಪಡಿಸಿಕೊಳ್ಳಲಿರುವ ಭೂಮಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು. ವಿದ್ಯುತ್ ಲೈನ್ ಹಾದು ಹೋಗುವ ಪ್ರದೇಶದಲ್ಲಿ 46 ಮೀಟರ್ ಜಾಗದ ಅಗತ್ಯವಿದ್ದು, ವಿದ್ಯುತ್ ಲೈನ್ ಹಾದುಹೋಗುವ ಪ್ರದೇಶದಲ್ಲಿ 30ಮೀಟರ್ ಹಾಗೂ ಇದರ ಎರಡೂ ಬದಿ ತಲಾ ಎಂಟು ಮೀ. ಬಫರ್ ಝೋನ್ ಆಗಿ ಪರಿಗಣಿಸಲಾಗುತ್ತಿದೆ. ಇದರಿಂದ 30 ಮೀಟರ್ ದೂರಕ್ಕೆ ಮನೆ ಅಥವಾ ಇತರ ನಿರ್ಮಾಣ ಚಟುವಟಿಕೆಗಳಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ವಿದ್ಯುತ್ ಗೋಪುರದ ಎರಡೂ ಬದಿಯಲ್ಲಿರುವ 5 ಮೀಟರ್ ಒಳಗಿನ ಎಲ್ಲ ಮರಗಳನ್ನು ಕಡಿದು ತೆಗೆಯಲಾಗುವುದು. 46 ಮೀಟರ್ ಒಳಗಿನ ಮರಗಳು ವಿದ್ಯುತ್ ಲೈನ್‍ನಿಂದ 8 ಮೀಟರ್ ದೂರದಲ್ಲಿರಬೇಕು. ಇದಕ್ಕಿಂತ ಕಡಿಮೆ ಅಂತರವಿರುವ ಮರಗಳನ್ನೂ ಕಡಿಯಲಾಗುವುದು. ಕತ್ತರಿಸಿದ ಎಲ್ಲಾ ಮರಗಳಿಗೆ ಸರ್ಕಾರ ನಿರ್ಧರಿಸಿದಂತೆ ಯುಕೆಟಿಎಲ್ ಕಂಪನಿಯು ಪರಿಹಾರ ಒದಗಿಸಲಿದೆ. 30 ಮೀಟರ್ ಒಳಗಿನ ಅಸ್ತಿತ್ವದಲ್ಲಿರುವ ಮನೆಗಳಿಗೆ ಪಿಡಬ್ಲ್ಯುಡಿ ನಿಗದಿಪಡಿಸಿದಂತೆ ಪರಿಹಾರದ ಜತೆಗೆ ಟವರ್ ಇರುವ ಭೂಮಿಗೆ ನ್ಯಾಯಬೆಲೆಯ ಎರಡು ಪಟ್ಟು ಮೌಲ್ಯದ ಶೇ. 85ರಷ್ಟು ಪರಿಹಾರವನ್ನು ನೀಡಲಾಗುತ್ತದೆ. ಲೈನ್ ಎಳೆಯುವ ಪ್ರದೇಶಗಳಲ್ಲಿನ ಜಮೀನಿನ ಪರಿಹಾರದ ಕುರಿತು ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ಸರ್ಕಾರದ ನಿರ್ದೇಶನದಂತೆ ಬೆಲೆ ನೀಡಲಾಗುವುದು. ಸಭೆಯಲ್ಲಿ ಕಿನಾನೂರು-ಕರಿಂದಳ, ಕುಂಬ್ಡಾಜೆ, ಬೇಡಡಡ್ಕ, ಕೋಡೋಂಬೆಳ್ಳೂರ್, ಕಾರಡ್ಕ, ಬೆಳ್ಳೂರು, ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು, ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಯುಕೆಟಿಎಲ್ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.