ನವದೆಹಲಿ (PTI): ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ಸಮಯ ಬೇಕಾಗುವುದನ್ನು ಪರಿಗಣಿಸಿ 42 ದಿನಗಳ ವಿಶೇಷ ಸಾಂದರ್ಭಿಕ ರಜೆ (ಎಸ್‌ಸಿಎಲ್) ಸೌಲಭ್ಯ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

'ದಾನಿಗಳಿಂದ ಅಂಗಾಂಗ ತೆಗೆಯುವುದು ಒಂದು ದೊಡ್ಡ ಶಸ್ತ್ರಚಿಕಿತ್ಸೆಯಾಗಿದೆ. ಆಸ್ಪತ್ರೆಗೆ ದಾಖಲಾದ ಮತ್ತು ಆಸ್ಪತ್ರೆಯಲ್ಲಿರುವ ಅವಧಿ ಸೇರಿ ಚೇತರಿಕೆಗೂ ಸಮಯ ಬೇಕಾಗುತ್ತದೆ. ಅಂಗಾಂಗ ದಾನದಿಂದ ಮತ್ತೊಬ್ಬರಿಗೆ ನೆರವಾಗಲು, ಕೇಂದ್ರ ಸರ್ಕಾರಿ ನೌಕರರಲ್ಲಿ ಅಂಗಾಂಗ ದಾನವನ್ನು ಉತ್ತೇಜಿಸಲು ಇದನ್ನು ವಿಶೇಷ ಕಲ್ಯಾಣ ಕಾರ್ಯಕ್ರಮವಾಗಿ ಪರಿಗಣಿಸಲಾಗಿದೆ. ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಗರಿಷ್ಠ 42 ದಿನಗಳ ವಿಶೇಷ ಸಾಂದರ್ಭಿಕ ರಜೆ ನೀಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗಿದೆ' ಎಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಸದ್ಯ ವಿಶೇಷ ಸಾಂದರ್ಭಿಕ ರಜೆಗಳನ್ನು 30 ದಿನಗಳ ಅವಧಿಗೆ ನೀಡಲಾಗುತ್ತಿದೆ. ದಾನಿಯ ಅಂಗಾಂಗ ತೆಗೆಯುವ ಯಾವುದೇ ಬಗೆಯ ಶಸ್ತ್ರಚಿಕಿತ್ಸೆ ಆಗಲಿ ಅದಕ್ಕೆ ಸರ್ಕಾರಿ ನೋಂದಾಯಿತ ವೈದ್ಯರ ಶಿಫಾರಸಿನ ಪ್ರಕಾರ ವಿಶೇಷ ಸಾಂದರ್ಭಿಕ ರಜೆಗಳ ಅವಧಿಯು ಗರಿಷ್ಠ 42 ದಿನಗಳವರೆಗೆ ಇರುತ್ತದೆ ಎಂದು ಆದೇಶದಲ್ಲಿ ಹೇಳಿದೆ.