ನವದೆಹಲಿ : ಕೋವಿಡ್-19 ನ ಸದ್ಯದ ತಳಿಯು ಸೌಮ್ಯವಾಗಿದೆ ಮತ್ತು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಂಸ್ಥೆಯು ಈಗಾಗಲೇ ಐದರಿಂದ ಆರು ಮಿಲಿಯನ್ ಕೊವೊವ್ಯಾಕ್ಸ್ ಲಸಿಕೆಯ ಡೋಸ್‌ಗಳನ್ನು ಉತ್ಪಾದಿಸಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಶನಿವಾರ ಹೇಳಿದ್ದಾರೆ.
ಮಾರ್ಚ್‌ನಿಂದ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಮಧ್ಯೆ ಪೂನಾವಾಲಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 12,193 ಹೊಸ ಕೋವಿಡ್-19 ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 67,556ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಸದ್ಯದ ಕೋವಿಡ್ ತಳಿ ತೀವ್ರವಾಗಿಲ್ಲ. ಇದು ಸೌಮ್ಯವಾದ ತಳಿಯಾಗಿದೆ. ಕೇವಲ ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ, ವಯಸ್ಸಾದ ಜನರು ಬೂಸ್ಟರ್ ಡೋಸ್ ಅನ್ನು ಪಡೆಯಬಹುದು. ಆದರೆ, ಅದನ್ನು ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂಬುದು ಅವರವರ ಆಯ್ಕೆಯಾಗಿದೆ ಎಂದು ಹೇಳಿದರು.
ಐದರಿಂದ ಆರು ಮಿಲಿಯನ್ ಡೋಸ್ ಕೋವೊವಾಕ್ಸ್ ಲಭ್ಯವಿದೆ. ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ನಾವು ಅದೇ ಪ್ರಮಾಣದ ಕೋವಿಶೀಲ್ಡ್ ಡೋಸ್‌ಗಳನ್ನು ಉತ್ಪಾದಿಸುತ್ತೇವೆ ಎಂದು ಪೂನಾವಾಲ ಹೇಳಿದರು.
ನಾವು ಯುಎಸ್ ಮತ್ತು ಯುರೋಪ್‌ನಲ್ಲಿ ಕೊವೊವ್ಯಾಕ್ಸ್ ಲಸಿಕೆಯನ್ನು ಒದಗಿಸುತ್ತಿದ್ದೇವೆ. ಯುಎಸ್ ಮತ್ತು ಯುರೋಪ್‌ನಲ್ಲಿ ಅನುಮೋದಿಸಲ್ಪಟ್ಟ ಭಾರತದಲ್ಲಿ ತಯಾರಿಸಲಾಗುವ ಏಕೈಕ ಕೋವಿಡ್ ಲಸಿಕೆ ಇದಾಗಿದೆ. ಸದ್ಯ ಲಸಿಕೆಯ ಬೇಡಿಕೆ ತುಂಬಾ ಕಡಿಮೆಯಿದೆ ಎಂದು ಪೂನಾವಾಲ ಹೇಳಿದರು.
ಶುಕ್ರವಾರದ ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಓಮಿಕ್ರಾನ್‌ನ XBB.1.16 ರೂಪಾಂತರವು ಸದ್ಯ ರಾಜ್ಯದಲ್ಲಿ ಪ್ರಬಲವಾದ ತಳಿಯಾಗಿದೆ ಎಂದಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಹರಿಯಾಣ ಮತ್ತು ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿನ ತೀವ್ರತೆಯನ್ನು ತಗ್ಗಿಸಿ, ಶೂನ್ಯ ಕೋವಿಡ್ ಮಟ್ಟ ಕಾಯ್ದುಕೊಳ್ಳಲು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.