ಚೆನ್ನೈ (PTI): ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರಿಗೆ ₹500 ಕೋಟಿ ಮಾನನಷ್ಟ ಪರಿಹಾರ ನೀಡುವಂತೆ ರಾಜ್ಯದ ಆಡಳಿತಾರೂಢ ಡಿಎಂಕೆ ನ್ಯಾಯಾಂಗ ನೋಟಿಸ್ ಜಾರಿ ಮಾಡಿದೆ.
ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು ಅಣ್ಣಾಮಲೈ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದರು.
ಅದನ್ನು 'ಡಿಎಂಕೆ ಫೈಲ್ಸ್' ಎಂದು ಕರೆದಿದ್ದರು. ಈ ಆರೋಪಗಳನ್ನು ಪ್ರಶ್ನಿಸಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ 10 ಪುಟಗಳ ನ್ಯಾಯಾಂಗ ನೋಟಿಸ್ ಹೊರಡಿಸಿದ್ದಾರೆ.
ಸ್ಟಾಲಿನ್ ಅವರು ತಮ್ಮ 56 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಯಾರಿಂದಲೂ ಒಂದು ರೂಪಾಯಿಯನ್ನೂ ಪಡೆದಿಲ್ಲ. ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವುದಕ್ಕಾಗಿ ಬೇಷರತ್ ಕ್ಷಮೆ ಯಾಚಿಸಬೇಕು. ಅವರ ವಿರುದ್ಧದ ಆರೋಪಗಳನ್ನು ಹೊಂದಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಬೇಕು. ಆರೋಪಗಳಿಂದ ಆಗಿರುವ ಮಾನನಷ್ಟ ತುಂಬಿಕೊಡಲು ₹500 ಕೋಟಿ ಪರಿಹಾರ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.