ನವದೆಹಲಿ: ಬೇಸಿಗೆ ಧಗೆಯಲ್ಲಿ ಬೆಂದು ಹೋಗಿರುವ ಜನಕ್ಕೆ ಕೇಂದ್ರ ಹವಾಮಾನ ಇಲಾಖೆ ಕೊಂಚ ಸಮಾಧಾನದ ಮಾಹಿತಿ ನೀಡಿದ್ದು, ಮುಂದಿನ 5 ದಿನ ಭಾರತದಲ್ಲಿ ಉಷ್ಣಹವೆ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಿದೆ.
ಈ ವಾರ ಜನರನ್ನು ಬೆಚ್ಚಿಬೀಳಿಸಿದ್ದ ಬಿಸಿಗಾಳಿ ಅಥವಾ ಉಷ್ಣಹವೆ ಪರಿಸ್ಥಿತಿಯಿಂದ ಮುಂದಿನ ಐದು ದಿನಗಳ ಕಾಲ ಭಾರತದ ಬಹುತೇಕ ಭಾಗಗಳು ನೆಮ್ಮದಿಯ ನಿಟ್ಟುಸಿರು ಬಿಡಲಿವೆ. ಈ ಬಗ್ಗೆ ಸ್ವತಃ ಭಾರತೀಯ ಹವಾಮಾನ ಇಲಾಖೆ ಶನಿವಾರ ಮಾಹಿತಿ ನೀಡಿದ್ದು, 'ವಾಯುವ್ಯ ಮಧ್ಯಪ್ರದೇಶದ ಮೇಲೆ ಒಂದು ಟ್ರಫ್ (ಚಂಡಮಾರುತ ಎಂದೂ ಕರೆಯಲ್ಪಡುವ ಇದು ಕಡಿಮೆ ಒತ್ತಡದ ವ್ಯವಸ್ಥೆ) ಅಥವಾ ಚಂಡಮಾರುತದ ಪರಿಚಲನೆ ಮತ್ತು ಇನ್ನೊಂದು ತಮಿಳುನಾಡಿನ ಒಳಭಾಗದಲ್ಲಿ ಚಲನೆ ಇದ್ದು, ಇದು ಉಷ್ಣಹವೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ ಎಂದು ಹೇಳಿದೆ.
ಟ್ರಫ್ ಪರಿಣಾಮ ತುಲನಾತ್ಮಕವಾಗಿ ಕಡಿಮೆ ಒತ್ತಡದ ಚಂಡಮಾರುತ ವಾಯುವ್ಯ ಮಧ್ಯಪ್ರದೇಶದಿಂದ ತೆಲಂಗಾಣದ ಮೂಲಕ ದಕ್ಷಿಣ ತಮಿಳುನಾಡಿಗೆ ಹಾದು ಹೋಗುತ್ತದೆ. ಖಾಸಗಿ ಮುನ್ಸೂಚಕ ಸ್ಕೈಮೆಟ್ ಹವಾಮಾನ ಸಂಸ್ಥೆಯ ಮಾಹಿತಿ ಅನ್ವಯ ಈಶಾನ್ಯ ಬಿಹಾರದಿಂದ ಜಾರ್ಖಂಡ್ ಮೂಲಕ ಒಡಿಶಾದವರೆಗೆ ಮತ್ತೊಂದು ಟ್ರಫ್ ಅಥವಾ ಚಂಡಮಾರುತವನ್ನು ವಿಸ್ತರಿಸಿದೆ ಎಂದು ಹೇಳಿದೆ. ಹವಾಮಾನ ತಜ್ಞರು ಹೇಳುವ ಪ್ರಕಾರ ಒಂದು ಟ್ರಫ್ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮತ್ತು ಮಳೆಯನ್ನು ತರುತ್ತದೆ, ಇದು ತಾಪಮಾನದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.