ನವದೆಹಲಿ: ಬಹುತೇಕ ಅನುಸೂಚಿತ ಔಷಧಿಗಳ (ಶೆಡೂಲ್ಡ್ ಡ್ರಗ್ಸ್) ಗರಿಷ್ಠ ದರಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮಿತಿ ನಿಗದಿಪಡಿಸಿದೆ. ಇದರ ಪರಿಣಾಮ, ಏಪ್ರಿಲ್‌ನಿಂದ ಅನ್ವಯವಾಗುವಂತೆ 651 ಅಗತ್ಯ ಔಷಧಿಗಳ ದರಗಳು ಸರಾಸರಿ ಶೇ 6.73ರಷ್ಟು ಕಡಿಮೆಯಾಗಿವೆ.
ಈ ಕುರಿತು ರಾಷ್ಟ್ರೀಯ ಔಷಧಿಗಳ ದರ ನಿಗದಿ ಪ್ರಾಧಿಕಾರವು (ಎನ್‌ಪಿಪಿಎ) ಟ್ವೀಟ್ ಮಾಡಿದೆ.
'ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ (ಎನ್‌ಎಲ್‌ಇಎಂ) 870 ಅನುಸೂಚಿತ ಔಷಧಿಗಳ ಪೈಕಿ, ಈ ವರೆಗೆ 651 ಔಷಧಿಗಳ ಗರಿಷ್ಠ ದರಗಳ ಮೇಲೆ ಮಿತಿ ಹೇರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ' ಎಂದೂ ಎನ್‌ಪಿಪಿಎ ಟ್ವೀಟ್‌ನಲ್ಲಿ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಎನ್‌ಎಲ್‌ಇಎಂ ಅನ್ನು ತಿದ್ದುಪಡಿ ಮಾಡಿತ್ತು.
'651 ಅಗತ್ಯ ಔಷಧಿಗಳ ದರವು ಶೇ 12.12ರಷ್ಟು ಹೆಚ್ಚಳವಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರವು ದರ ಹೆಚ್ಚಳಕ್ಕೆ ಸಂಬಂಧಿಸಿ ಮಿತಿ ಹೇರಿದ್ದರಿಂದಾಗಿ ಅವುಗಳ ದರಗಳು ಏಪ್ರಿಲ್ 1ರಿಂದ ಶೇ 6.73ರಷ್ಟು ಕಡಿಮೆಯಾಗಿವೆ' ಎಂದು ಎನ್‌ಪಿಪಿಎ ಹೇಳಿದೆ.
ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಔಷಧಿಗಳ ದರಗಳಲ್ಲಿ ವಾರ್ಷಿಕ ಶೇ 12.12ರಷ್ಟು ಹೆಚ್ಚಳವಾಗಬೇಕಿತ್ತು. ಆದರೆ, ದರಗಳಲ್ಲಿನ ಈ ಕಡಿತದಿಂದಾಗಿ ಗ್ರಾಹಕರಿಗೆ ಲಾಭವಾಗಲಿದೆ ಎಂದೂ ಎನ್‌ಪಿಪಿಎ ಹೇಳಿದೆ.
ಕಳೆದ ಮಾರ್ಚ್ 25ರಂದು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದ ಎನ್‌ಪಿಪಿಎ, '2022ಕ್ಕೆ ಸಂಬಂಧಿಸಿ ಸಗಟು ದರ ಸೂಚ್ಯಂಕವು (ಡಬ್ಲ್ಯುಪಿಐ) ಶೇ 12.12ರಷ್ಟಿತ್ತು' ಎಂದು ಹೇಳಿತ್ತು.
ಟೀಕೆ-ತಿರುಗೇಟು: ಅಗತ್ಯ ಔಷಧಿಗಳ ದರವು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಕೆಲ ಅಗತ್ಯ ಔಷಧಿಗಳ ದರಗಳನ್ನು ಹೆಚ್ಚಿಸಲಾಗಿದೆ ಎಂಬ ವರದಿಗಳನ್ನು ಮುಂದಿಟ್ಟುಕೊಂಡು ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದರು.
'ಜನರ ಕಿಸೆಗಳನ್ನು ಲೂಟಿ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸುಪಾರಿ (ಗುತ್ತಿಗೆ) ಪಡೆದಿದ್ದಾರೆ' ಎಂದು ಟೀಕಿಸಿದ್ದರು.
ಸರಣಿ ಟ್ವೀಟ್‌ಗಳ ಮೂಲಕ ಖರ್ಗೆ ಅವರಿಗೆ ತಿರುಗೇಟು ನೀಡಿರುವ ಸಚಿವ ಮಾಂಡವೀಯ, 'ಎನ್‌ಎಲ್‌ಇಎಂನಲ್ಲಿರುವ ಔಷಧಿಗಳ ಪೈಕಿ 651 ಅಗತ್ಯ ಔಷಧಿಗಳು ಅಗ್ಗವಾಗಿದ್ದು, ಈ ಸಂಬಂಧ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ' ಎಂದಿದ್ದಾರೆ.
' ಈ ಕ್ರಮದಿಂದಾಗಿ, ಗ್ರಾಹಕರ ಜೇಬಿಗೆ ಹೊರೆ ಕಡಿಮೆಯಾಗಿ, ವಾರ್ಷಿಕ ಅಂದಾಜು ₹ 3,500 ಕೋಟಿಯಷ್ಟು ಉಳಿತಾಯವಾಗಲಿದೆ' ಎಂದೂ ತಿರುಗೇಟು ನೀಡಿದ್ದಾರೆ.