ನವದೆಹಲಿ:ಭಾರತೀಯ ಸಮಾಜದಲ್ಲಿ ಜಾತಿಯ ಪಿಡುಗು ಎಷ್ಟೊಂದು ಆಳವಾಗಿ ಬೇರೂರಿದೆಯೆಂದರೆ ಭಾರತದಲ್ಲಿಯ ಕುಟುಂಬಗಳು ತಮ್ಮ ಮಕ್ಕಳನ್ನು ಬೇರೆ ಜಾತಿಯ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಡಲು ಈಗಲೂ ಹಿಂಜರಿಯುತ್ತಿವೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಇತ್ತೀಚಿಗೆ ವಿಷಾದಿಸಿದೆ.
ದೇಶಕ್ಕೆ ಸ್ವಾತಂತ್ರ ದೊರೆತು 75 ವರ್ಷಗಳ ಬಳಿಕವೂ ಜಾತಿ ಪಿಡುಗು ಆಳವಾಗಿ ಬೇರೂರಿರುವುದಕ್ಕೆ ನ್ಯಾ.ರಾಹುಲ್ ಚತುರ್ವೇದಿ ಅವರ ಏಕನ್ಯಾಯಾಧೀಶ ಪೀಠವು ತೀವ್ರ ಕಳವಳವನ್ನು ವ್ಯಕ್ತಪಡಿಸಿತು.
ಅಪಹರಣ,ಮದುವೆಗೆ ಬಲವಂತ ಮತ್ತು ಪೊಕ್ಸೊ ಕಾಯ್ದೆಯಡಿ ಆರೋಪಗಳಲ್ಲಿ ಪತಿಯ ವಿರುದ್ಧ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಸಂತ್ರಸ್ತ ಮಹಿಳೆ ಮತ್ತು ಆಕೆಯ ಆರೋಪಿ ಪತಿ ಸಲ್ಲಿಸಿರುವ ಜಂಟಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ತನ್ನ ಮಗಳು ಆರೋಪಿಯನ್ನು ಸ್ವಪ್ರೇರಣೆಯಿಂದ ಮದುವೆಯಾಗಿ ಗಂಡು ಮಗುವನ್ನು ಹೊಂದಿದ್ದರೂ ಆಕೆ ಅಂತರ್ಜಾತಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯ ತಂದೆ ಈಗಲೂ ಪ್ರಕರಣವನ್ನು ನಡೆಸುತ್ತಿದ್ದಾರೆ ಎಂದು ಬೆಟ್ಟು ಮಾಡಿದ ನ್ಯಾಯಾಲಯವು,'ಇದು ನಮ್ಮ ಸಮಾಜದ ಕರಾಳ ಮುಖದ ಸ್ಪಷ್ಟ ಪ್ರಕರಣವಾಗಿದ್ದು,ಇಲ್ಲಿ ಈಗಲೂ ಕುಟುಂಬಗಳು ತಮ್ಮ ಮಗ ಅಥಾ ಮಗಳಿಗೆ ಅಂತರ್ಜಾತಿ ವಿವಾಹವನ್ನು ಮಾಡಲು ನಾಚಿಕೊಳ್ಳುತ್ತಿವೆ.
ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಒಬಿಸಿ ಸಮುದಾಯಕ್ಕೆ ಸೇರಿದ್ದರೆ ಅರ್ಜಿದಾರ ಯುವಕ ಪರಿಶಿಷ್ಟ ಜಾತಿಗೆ ಸೇರಿದ್ದು, ಹದಿಹರೆಯದಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದರು. ವಿವಾಹದ ಫಲವಾಗಿ ದಂಪತಿ 16,ಸೆ.2022ರಂದು ಶಿವಾಂಶ ಎಂಬ ಗಂಡುಮಗುವನ್ನು ಪಡೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಅರ್ಜಿದಾರರು ನಿರರ್ಥಕ ದಾವೆಯನ್ನು ಎದುರಿಸುತ್ತಿದ್ದಾರೆ. ಕಕ್ಷಿದಾರರ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವು ಸ್ವಾತಂತ್ರ ಲಭಿಸಿದ 75 ವರ್ಷಗಳ ಬಳಿಕವೂ ಆಳವಾಗಿ ಬೇರೂರಿರುವ ಜಾತಿ ಪಿಡುಗಿನ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿತು.
ಮದುವೆಯಾದಾಗ ಬಾಲಕಿಗೆ ಕೇವಲ 17 ವರ್ಷಗಳಾಗಿದ್ದವು ಎನ್ನುವುದು ಕಾನೂನಿನ ಏಕೈಕ ಅಡ್ಡಿಯಾಗಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಏನೇ ಆದರೂ ತನ್ನ ವಿವಾಹಿತ ಮಗಳ ಉಜ್ವಲ ಭವಿಷ್ಯಕ್ಕಾಗಿ ತಂದೆಯು ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕಿತ್ತು ಎಂದು ನ್ಯಾಯಾಲಯವು ಹೇಳಿತು. ಪ್ರಕರಣದ ಮುಂದಿನ ವಿಚಾರಣೆಯು ಎ.28ರಂದು ನಡೆಯಲಿದೆ.