ಸಂಬಲ್ಪುರ: ಹನುಮ ಜಯಂತಿ ಆಚರಣೆ ವೇಳೆ ಒಡಿಶಾದ ಸಂಬಲ್ಪುರ ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 79 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ನಗರದಲ್ಲಿ ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ, ಇಂಟರ್ನೆಟ್ ಸ್ಥಗಿತ ಜೊತೆಗೆ ಕರ್ಫ್ಯೂ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ. ಶನಿವಾರ ಮುಂಜಾನೆ ಕರ್ಫ್ಯೂ ಘೋಷಿಸಿದಾಗಿನಿಂದ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ ಎಂದು ಸಂಬಲ್‌ಪುರ ಎಸ್ಪಿ ಬಿ ಗಂಗಾಧರ್ ತಿಳಿಸಿದ್ದಾರೆ. ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 12 ರಂದು ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ 26 ಜನರನ್ನು ಬಂಧಿಸಿದ್ದರೆ, ಏಪ್ರಿಲ್ 14 ರಂದು ಮೆರವಣಿಗೆಯಲ್ಲಿ ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಆರೋಪದಲ್ಲಿ 53 ಜನರನ್ನು ಬಂಧಿಸಲಾಗಿದೆ. ಸಂಬಲ್ಪುರ ಜಿಲ್ಲೆಯಲ್ಲಿ ಏಪ್ರಿಲ್ 17 ರ ಬೆಳಿಗ್ಗೆ 10 ರವರೆಗೆ ರಾಜ್ಯ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಒಡಿಶಾ ಡಿಜಿಪಿ ಸುನಿಲ್ ಕೆ ಬನ್ಸಾಲ್ ಹೇಳಿದ್ದಾರೆ. ಆದಾಗ್ಯೂ, ನಿಷೇಧಿತ ಆದೇಶಗಳನ್ನು ಭಾನುವಾರ ವಿವಿಧ ನೇಮಕಾತಿ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಸಡಿಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.