ತಿರುವನಂತಪುರ: ಲಾಟರಿಯಲ್ಲಿ ಬಹುಮಾನವಾಗಿ 80 ಲಕ್ಷ ರೂ. ಬಂದ ಮಾರನೇ ದಿನವೇ ಯುವಕ ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಪಂಗೋಡೆ ಮೂಲದ ಸಜೀವ್ (35) ಎಂದು ಗುರುತಿಸಲಾಗಿದೆ.
ಸ್ನೇಹಿತರ ಜತೆ ಸೇರಿ ಮದ್ಯದ ಪಾರ್ಟಿ ನಡೆಸುತ್ತಿದ್ದಾಗ ಮಣ್ಣಿನ ದಿಬ್ಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಕಳೆದ ವಾರ ಕೇರಳ ಸರ್ಕಾರ ವಿತರಿಸಿದ ಲಾಟರಿಯಿಂದ ಟೈಲ್ಸ್ ಕೆಲಸಗಾರ ಸಜೀವನ್ ಅವರಿಗೆ 80 ಲಕ್ಷ ರೂಪಾಯಿ ಜಾಕ್‌ಪಾಟ್ ಸಿಕ್ಕಿತ್ತು. ತೆರಿಗೆ ಕಡಿತದ ನಂತರ ಸಜೀವನ್ ಅವರ ಖಾತೆಗೆ 49. 75 ಲಕ್ಷ ರೂ. ಜಮಾ ಆಗಿದ್ದು, ಅವರ ಕುಟುಂಬದಲ್ಲಿ ಭರವಸೆ ಮತ್ತು ಸಂತಸ ಮೂಡಿಸಿತು. ಬಹುಮಾನ ಗೆದ್ದ ಖುಷಿಯಲ್ಲಿ ಸಜೀವನ್ ಆತ್ಮೀಯರಿಗೆ ಪಾರ್ಟಿಯನ್ನು ಏರ್ಪಡಿಸಿದ್ದರು.
ಪಾರ್ಟಿಯ ನಡುವೆ ಮದ್ಯದ ಅಮಲಿನಲ್ಲಿ ಆತನ ಆತ್ಮೀಯ ಗೆಳೆಯ 'ಮಾಯಾವಿ' ಸಂತೋಷ್ ಎಂಬಾತ ಸಜೀವನ್ ಜೊತೆ ಜಗಳ ಮಾಡಿಕೊಂಡಿದ್ದ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಮಾಯಾವಿ, ಸಜೀವನ್ನನ್ನು ಮಣ್ಣಿನ ದಿಬ್ಬದಿಂದ ಕೆಳಗೆ ನೂಕಿದ್ದ. ಕೆಳಗೆ ಬಿದ್ದು ಗಾಯಗೊಂಡು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಗಂಭೀರ ಸ್ಥಿತಿಯಲ್ಲಿದ್ದ ಸಜೀವನ್ 10 ಗಂಟೆಗಳ ನಂತರ ನಿಧನರಾದರು.
ಸಜೀವನ್ ಸಾವಿಗೆ ಮಾಯಾವಿ ಕಾರಣ ಎಂದು ಆತನ ಕುಟುಂಬದವರು ಆರೋಪಿಸಿದ್ದು, ದೂರು ದಾಖಲಿಸಿದ ಪೊಲೀಸರು ಶೀಘ್ರವೇ ಬಂಧಿಸಿದ್ದಾರೆ.