ನವದೆಹಲಿ:ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿಗೊಂಡಿರುವ, ಆದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ವ್ಯಾಪ್ತಿಗೊಳಪಟ್ಟಿರದ ಸುಮಾರು ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಪೋರ್ಟಲ್ 28.6 ಕೋ.ನೋಂದಾಯಿತರನ್ನು ಹೊಂದಿದ್ದು,ಈ ಪೈಕಿ 20.63 ಕೋಟಿ ಜನರು ಪಡಿತರ ಚೀಟಿಗಳನ್ನು ಹೊಂದಿದ್ದಾರೆ.
ಪಡಿತರ ಚೀಟಿ ಇಲ್ಲದಿದ್ದರೆ ವಲಸೆ/ಅಸಂಘಟಿತ ಕ್ಷೇತ್ರಗಳ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಸರಕಾರಿ ಯೋಜನೆಗಳ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಲಾಭಗಳಿಂದಲೂ ವಂಚಿತರಾಗಬಹುದು ಎಂದು ಗುರುವಾರದ ತನ್ನ ಆದೇಶದಲ್ಲಿ ನ್ಯಾ.ಎಂ.ಆರ್.ಶಾ ನೇತೃತ್ವದ ಪೀಠವು ಹೇಳಿದೆ. ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ಹರ್ಷ ಮಂದರ್ ಮತ್ತು ಜಗದೀಪ ಛೋಕರ್ ಅವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.
ಅಂಕಿಅಂಶಗಳು 2011ರ ಜನಗಣತಿಯನ್ನು ಆಧರಿಸಿರುವುದರಿಂದ 10 ಕೋ.ಗೂ. ಅಧಿಕ ಕಾರ್ಮಿಕರು ಆಹಾರ ಭದ್ರತೆ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಬಹುದು. 2011ರ ಜನಗಣತಿಯ ಬಳಿಕ ದೇಶದ ಜನಸಂಖ್ಯೆ ಹೆಚ್ಚಿದೆ ಎಂದು ಅರ್ಜಿದಾರರ ಪರ ವಕೀಲರಾದ ಪ್ರಶಾಂತ ಭೂಷಣ ಮತ್ತು ಚೆರಿಲ್ ಡಿಸೋಜಾ ವಾದಿಸಿದರು.
ಪ್ರತಿಯೊಬ್ಬ ವಲಸೆ ಕಾರ್ಮಿಕನನ್ನು ಪಡಿತರ ಚೀಟಿ ಪಟ್ಟಿಯಲ್ಲಿ ತ್ವರಿತವಾಗಿ ಸೇರಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದ ನ್ಯಾಯಾಲಯವು, ತನ್ನ ಆದೇಶವನ್ನು ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ತಿಂಗಳ ಗಡುವನ್ನು ನೀಡಿತು. ಮುಂದಿನ ವಿಚಾರಣಾ ದಿನಾಂಕವಾದ ಅ.3ರೊಳಗೆ ಸ್ಥಿತಿಗತಿ ವರದಿಯೊಂದನ್ನು ಸಲ್ಲಿಸುವಂತೆ ಅದು ಕೇಂದ್ರ ಸರಕಾರಕ್ಕೆ ಸೂಚಿಸಿತು.
ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಹೊಂದಿದ್ದರೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿದಿರುವ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ಒದಗಿಸುವ ಕಾರ್ಯಕ್ಕೆ ವ್ಯಾಪಕ ಪ್ರಚಾರ ನೀಡುವಂತೆಯೂ ಸರ್ವೋಚ್ಚ ನ್ಯಾಯಾಲಯವು ಸೂಚಿಸಿತು.
ಇಂತಹ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳ ಮೂಲಕ ಅವರನ್ನು ಸಂಪರ್ಕಿಸಬಹುದು ಎಂದೂ ಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿತು.