ನವದೆಹಲಿ: ಕಳೆದ ಮೂರು ತಿಂಗಳಲ್ಲಿ ದೇಶದಲ್ಲಿ ಒಟ್ಟು 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲೇ ಒಂಬತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎನ್‌ಐಟಿ)ಯಲ್ಲಿ ಈ ವರ್ಷ ತಲಾ ಮೂರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
2018ರಿಂದ 2023 ರವರೆಗೆ, ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 103 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2018 ಮತ್ತು 2019ರಲ್ಲಿ ತಲಾ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020ರಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ 13ಕ್ಕೆ ಮಕ್ಕು 2021 ರಲ್ಲಿ 10ಕ್ಕೆ ಇಳಿದಿತ್ತು. ಆದರೆ 2022 ರಲ್ಲಿ ಅದು 25ಕ್ಕೆ ಏರಿಕೆಯಾಗಿದೆ. ಐಐಟಿಗಳಲ್ಲೇ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಐಐಟಿಯಲ್ಲಿ ಒಂಬತ್ತು ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
2022 ರಲ್ಲಿ ವರದಿಯಾದ 25 ಆತ್ಮಹತ್ಯೆ ಪ್ರಕರಣಗಳಲ್ಲಿ ಒಂಬತ್ತು ಐಐಟಿಗಳಿಂದ, ಏಳು ಎನ್ಐಟಿಗಳಿಂದ, ಐದು ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ ಮತ್ತು ಮೂರು ಎಐಐಟಿಗಳಿಂದ ವರದಿಯಾಗಿವೆ.
"ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ನಡೆಯುವ ಪ್ರತಿ ಆತ್ಮಹತ್ಯೆ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಈ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಪ್ರಧಾನ್ ಹೇಳಿದ್ದಾರೆ.