ನವದೆಹಲಿ: ವಕೀಲರು ಮುಷ್ಕರ ನಡೆಸುವಂತಿಲ್ಲ ಹಾಗೂ ನ್ಯಾಯಾಂಗದ ಕಾರ್ಯಗಳಿಂದ ದೂರ ಉಳಿಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಏ.20 ರಂದು ಹೇಳಿದೆ.
ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಅಡ್ವೊಕೇಟ್ ಗಳು ಮನವಿ ಮಾಡಬಹುದಾಗಿರುವ ರೀತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸುವಂತೆ ಎಲ್ಲಾ ಹೈಕೋರ್ಟ್ ಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ನ್ಯಾ. ಎಂಆರ್ ಶಾ ಹಾಗೂ ಅಸಾದುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ, ಜಿಲ್ಲಾ ಕೋರ್ಟ್ ಮಟ್ಟದಲ್ಲಿ ಕುಂದುಕೊರತೆ ಪರಿಹಾರ ಸಮಿತಿ ರಚನೆಯಾಗಬೇಕೆಂದು ಹೇಳಿದ್ದು, ಈ ಮೂಲಕ ಫೈಲಿಂಗ್ ಅಥವಾ ಪ್ರಕರಣಗಳ ಪಟ್ಟಿ ಅಥವಾ ಕೆಳ ನ್ಯಾಯಾಂಗದ ಸದಸ್ಯರ ದುರ್ವರ್ತನೆ, ಕಾರ್ಯವಿಧಾನದ ಬದಲಾವಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಬೇಕೆಂದು ಹೇಳಿದ್ದಾರೆ.
ನಾವು ಮತ್ತೊಮ್ಮೆ ಹೇಳುತ್ತಿದ್ದೆವೆ ಬಾರ್ ಕೌನ್ಸಿಲ್ ನ ಯಾವುದೇ ಸದಸ್ಯ ಮುಷ್ಕರ ನಡೆಸುವಂತಿಲ್ಲ. ವಕೀಲರು ಮುಷ್ಕರ ನಡೆಸುವುದು ಅಥವಾ ಅವರ ಕೆಲಸದಿಂದ ದೂರವಿರುವುದು ನ್ಯಾಯಾಂಗ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ಈ ನ್ಯಾಯಾಲಯವು ಪದೇ ಪದೇ ಒತ್ತಿಹೇಳಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ತಮ್ಮ ದೂರುಗಳ ಪರಿಹಾರಕ್ಕೆ ಸೂಕ್ತ ವೇದಿಕೆಯನ್ನು ಕೋರಿ ಡೆಹ್ರಾಡೂನ್‌ನ ಜಿಲ್ಲಾ ವಕೀಲರ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಈ ಆದೇಶದ ಮೂಲಕ ವಿಲೇವಾರಿ ಮಾಡಿದೆ ಮತ್ತು ಈ ಆದೇಶದ ಪ್ರತಿಯನ್ನು ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗೆ ಕಳುಹಿಸಲು ಸೂಚಿಸಿ ಆದೇಶ ಹೊರಡಿಸಿದೆ.