ನವದೆಹಲಿ : ಸರಣಿಯಂತೆ ಎರಗಿದ ಹಾಗೂ ಸುದೀರ್ಘ ಕಾಲ ಕಾಡಿದ ಮೂರು ಬರಗಾಲ ಪರಿಸ್ಥಿತಿಗಳಿಂದ ಸಿಂಧೂ ಬಯಲಿನ ನಾಯರಿಕತೆಯ ದೊಡ್ಡ ನಗರಗಳು ಅವಸಾನ ಆಗಿರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಈಗ್ಗೆ 4,200 ವರ್ಷಗಳ ಹಿಂದೆ ಶುರುವಾದ ಬರಗಾಲವು ಅಲ್ಲಿಂದ ಸುಮಾರು ಎರಡು ಶತಮಾನ ಮುಂದುವರಿದಿತ್ತು ಎಂದು 'ಕಮ್ಯುನಿಕೇಷನ್ಸ್ ಅರ್ಥ್ ಆಯಂಡ್ ಎನ್ವಿರಾನ್‌ಮೆಂಟ್' ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
'ಒಂದೊಂದು ಬರಗಾಲಗವೂ 25 ವರ್ಷದಿಂದ 90 ವರ್ಷಗಳವರೆಗೆ ಇದ್ದವು' ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಂಶೋಧನಾ ವರದಿಯ ಸಹಲೇಖಕ ಕ್ಯಾಮರಾನ್ ಪೆಟ್ರಿ ಅವರು ಹೇಳಿದ್ದಾರೆ.
ಉತ್ತರಾಖಂಡದ ಪಿತ್ತೋರ್‌ಗಢದ ಗುಹೆಯಿಂದ ಸಂಗ್ರಹಿಸಿದ ಕಲ್ಲಿನ ಮಾದರಿಯೊಂದನ್ನು ಬಳಸಿಕೊಂಡು ಸಂಶೋಧಕರು ಐತಿಹಾಸಿಕ ಮಳೆಯ ದತ್ತಾಂಶಗಳನ್ನು ನಕ್ಷೆಯ ರೂಪದಲ್ಲಿ ರಚಿಸಿದ್ದಾರೆ. ಸ್ಟಾಲ್ಗಮೈಂಟ್ ಎಂಬ ಸ್ವರೂಪದ ಕಲ್ಲಿನ ಮೇಲೆ ಸೃಷ್ಟಿಯಾಗುವ ವಿವಿಧ ಪದರಗಳ ಬೆಳವಣಿಗೆಯನ್ನು ಸಂಶೋಧನೆಗೆ ಒಳಪಡಿಸಿ, ಮಳೆ ಸುರಿದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇಂಗಾಲ ಹಾಗೂ ಕ್ಯಾಲ್ಶಿಯಂನಂತಹ ವಾತಾವರಣದ ಅಂಶಗಳನ್ನು ಅಂದಿನ ವಾತಾವರಣದ ವಿಶ್ಲೇಷಣೆಗೆ ಬಳಸಿಕೊಳ್ಳಲಾಗಿದೆ. ಬರಗಾಲದ ಅವಧಿ ಎಷ್ಟಿತ್ತು ಹಾಗೂ ಎಷ್ಟು ವರ್ಷಗಳ ಹಿಂದೆ ಅದು ಸಂಭವಿಸಿತ್ತು ಎಂದು ತಿಳಿದುಕೊಳ್ಳಲು ಹೆಚ್ಚು ನಿಖರತೆಯಿಂದ ಕೂಡಿರುವ 'ಯುರೇನಿಯಂ ಡೇಟಿಂಗ್' ಪ್ರಕ್ರಿಯೆಯನ್ನು ತಜ್ಞರ ತಂಡ ನಿರ್ವಹಿಸಿದೆ.
ಹೀಗೆ ವಿವಿಧ ಆಯಾಮಗಳಲ್ಲಿ ಸಂಗ್ರಹಿಸಿದ ಭಿನ್ನ ಮಾದರಿಯ ಸಾಕ್ಷ್ಯಗಳನ್ನು ಒಟ್ಟಾಗಿಸಿ ನೋಡಿದಾಗ, ಈ ಎಲ್ಲ ಬರಗಾಲಗಳ ಸ್ವರೂಪಗಳು ಒಂದಕ್ಕೊಂದು ಸಂಬಂಧಿಸಿವೆ ಎಂಬ ವಿಚಾರ ಸಂಶೋಧನೆಯ ವೇಳೆ ದೃಢಪಟ್ಟಿತು ಎಂದು ಸಂಶೋಧನೆಯ ನೇತೃತ್ವ ವಹಿಸಿರುವ ಲೇಖಕಿ ಅಲೆನಾ ಗಿಶ್ಚೆ ಅವರು ಹೇಳಿದ್ದಾರೆ. ಇವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಅರ್ಥ್ ಸೈನ್ಸಸ್ ವಿಭಾಗದಲ್ಲಿ ತಮ್ಮ ಪಿಎಚ್.ಡಿ ಅಧ್ಯಯನದ ಭಾಗವಾಗಿ ಈ ಸಂಶೋಧನೆ ನಡೆಸಿದ್ದಾರೆ.
ಬೇಸಿಗೆ ಹಾಗೂ ಚಳಿಗಾಲದಲ್ಲಿ ಸುರಿದ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯ ನಿಖರ ಅವಧಿಗಳನ್ನು ಗಿಶ್ಚೆ ಅವರ ತಂಡ ಗುರುತಿಸಿದೆ. ಬರಗಾಲದಿಂದಾಗಿ ಈ ಎರಡೂ ಫಸಲು ಬೆಳೆಯುವ ಋತುಗಳ ಮೇಲೆ ಆಗಿರುವ ಪರಿಣಾಮವು, ಇಂದಿನ ಜಾಗತಿಕ ಹವಾಮಾನ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಅತಿ ಮಹತ್ವದ್ದೆನಿಸಿದೆ ಎಂದು ಪೆಟ್ರಿ ಅವರು ಹೇಳಿದ್ದಾರೆ. ಈ ಎರಡೂ ಋತುಗಳಲ್ಲಿ ಕಂಡುಬಂದ ಬರಗಾಲದ ಅವಧಿಯು ಕ್ರಮೇಣ ದೀರ್ಘವಾಗುತ್ತಾ ಹೋಯಿತು. ಮೂರನೇ ಬರಗಾಲವು ಸುಧೀರ್ಘ ಅವಧಿಯವರೆಗೆ ವಿಸ್ತರಿಸಿತ್ತು ಎಂದು ಸಂಶೋಧಕರು ಹೇಳಿದ್ದಾರೆ.