ತಿರುವನಂತಪುರ: 'ಸಹಕಾರ ತತ್ವದಡಿ ಕಾರ್ಯನಿರ್ವಹಿಸುವ ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಅವರು ತಿರುವನಂತಪುರ-ಕಾಸರಗೋಡು ನಡುವೆ ಸಂಪರ್ಕ ಕಲ್ಪಿಸುವ, ಕೇರಳದ ಮೊದಲ ವಂದೆ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿ, ಮಾತನಾಡಿದರು.
ಇಲ್ಲಿನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ, 'ಕೊಚ್ಚಿ ವಾಟರ್ ಮೆಟ್ರೊ' ಉದ್ಘಾಟಿಸಿದರು. ಡಿಂಡಿಗಲ್-ಪಳನಿ-ಪಾಲಕ್ಕಾಡ್ ರೈಲು ಮಾರ್ಗದ ವಿದ್ಯುದೀಕರಣ, ದೇಶದ ಮೊದಲ 'ಡಿಜಿಟಲ್ ಸೈನ್ಸ್ ಪಾರ್ಕ್' ಸೇರಿದಂತೆ ₹3,200 ಕೋಟಿಗೂ ಅಧಿಕ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
'ರಾಜ್ಯಗಳು ಪ್ರಗತಿ ಹೊಂದಿದರೆ, ಅದು ರಾಷ್ಟ್ರದ ಅಭಿವೃದ್ಧಿಗೆ ನೆರವಾಗುತ್ತದೆ ಎಂಬುದು ಕೇಂದ್ರದ ನಂಬಿಕೆ. ಹೀಗಾಗಿ, ಕೇರಳ ಅಭಿವೃದ್ಧಿಯಾದಾಗ ಭಾರತವೂ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ' ಎಂದು ಹೇಳಿದರು.
'ಕೇರಳದ ಜನ ಸುಶಿಕ್ಷಿತರು, ಪರಿಶ್ರಮಿಗಳು, ಬುದ್ಧಿವಂತರೂ ಆಗಿದ್ದಾರೆ. ವಿಶ್ವದ ವಿವಿಧ ದೇಶಗಳ ಆರ್ಥಿಕ ಸ್ಥಿತಿ ಬಗ್ಗೆ ಕೇರಳಿಗರಿಗೆ ಅರಿವು ಇದೆ. ಜಾಗತಿಕ ಮಟ್ಟದಲ್ಲಿ ಪ್ರತಿಕೂಲ ಪರಿಸ್ಥಿತಿ ಇದ್ದಾಗ್ಯೂ ಅಭಿವೃದ್ಧಿ ವಿಷಯದಲ್ಲಿ ಭಾರತವು ವಿಶ್ವದಲ್ಲಿ ಪ್ರಮುಖ ಸ್ಥಾನ ಹೊಂದಿದೆ' ಎಂದು ಹೇಳಿದರು.
'ಭಾರತದ ಬಗ್ಗೆ ವಿಶ್ವ ಸಮುದಾಯಕ್ಕೆ ವಿಶ್ವಾಸ ಹೆಚ್ಚಲು ಅನೇಕ ಕಾರಣಗಳಿವೆ. ಕಠಿಣ ನಿರ್ಧಾರ ಕೈಗೊಳ್ಳುವ ಸರ್ಕಾರ ಕೇಂದ್ರದಲ್ಲಿದೆ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಅಧಿಕ ಹೂಡಿಕೆಗೆ ಕ್ರಮ, ಜನಸಂಖ್ಯೆಗೆ ಅನುಗುಣವಾಗಿ ಹೂಡಿಕೆ, ಯುವಕರಿಗೆ ಕೌಶಲ ತರಬೇತಿ ನೀಡುತ್ತಿರುವುದು ಇದಕ್ಕೆ ಕಾರಣ. ಜೊತೆಗೆ, ಸುಲಲಿತ ಜೀವನ ಹಾಗೂ ಸುಲಲಿತ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿರುವುದು ಪ್ರಮುಖ ಕಾರಣವಾಗಿದೆ' ಎಂದು ಹೇಳಿದರು.
'ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಾಗುವುದಕ್ಕೆ ವಿದೇಶಗಳಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿರುವುದು ಕೂಡ ಕಾರಣ. ಕೇಂದ್ರದ ಇಂಥ ನಡೆಯಿಂದ, ವಿದೇಶಗಳಲ್ಲಿ ನೆಲೆಸಿರುವ ಕೇರಳ ಜನರಿಗೆ ಸಾಕಷ್ಟು ಪ್ರಯೋಜನವಾಗಿದೆ' ಎಂದು ವಿವರಿಸಿದರು.
ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಪ್ರಸ್ತಾಪಿಸಿದ ಮೋದಿ, '2014ಕ್ಕೂ ಮುಂಚೆ ಹಂಚಿಕೆ ಮಾಡಿದ್ದ ಹಣಕ್ಕೆ ಹೋಲಿಸಿದಾಗ, ಈಗ ಐದು ಪಟ್ಟು ಹೆಚ್ಚು ಅನುದಾನ ಒದಗಿಸಲಾಗಿದೆ' ಎಂದರು.
'ಭೌತಿಕ ಸಂಪರ್ಕವಲ್ಲದೇ ಡಿಜಿಟಲ್ ಸಂಪರ್ಕಕ್ಕೂ ಆದ್ಯತೆ ನೀಡಲಾಗಿದೆ. ತಿರುವನಂತಪುರದಲ್ಲಿ ತಲೆಯೆತ್ತಲಿರುವ ಡಿಜಿಟಲ್ ವಿಜ್ಞಾನ ಪಾರ್ಕ್‌ನಂತಹ ಯೋಜನೆಗಳು ಡಿಜಿಟಲ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡಲಿವೆ' ಎಂದು ಹೇಳಿದರು.
ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ಸಂಸದ ಶಶಿ ತರೂರ್ ಇದ್ದರು.
ರೋಡ್ ಶೋ: ಇದಕ್ಕೂ ಮುನ್ನ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿ, ರೋಡ್ ಶೋ ಮೂಲಕ ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು, ಬೆಂಬಲಿಗರು ಮೋದಿ ಅವರ ಮೇಲೆ ಹೂಮಳೆಗರೆದು, ಜಯಕಾರ ಕೂಗಿದರು.
ಕೇರಳದ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಮೋದಿ, ಜನರತ್ತ ಕೈಬೀಸುತ್ತಾ ಸಾಗಿದರು. ರೈಲು ನಿಲ್ದಾಣ ತಲುಪಿದ ನಂತರ, ವಂದೆ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ನೀಡುವುದಕ್ಕೂ ಮುನ್ನ ಅವರು ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
ತಿರುವಂತಪುರದಲ್ಲಿ ಮಂಗಳವಾರ ನಡೆದ ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬೆಂಬಲಿಗರತ್ತ ಕೈಬೀಸಿದರು -ಪಿಟಿಐ ಚಿತ್ರ